ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ವಿವೇಕಾನಂದ ಕಾಲೇಜು, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಐಕ್ಯೂಎಸಿ ವತಿಯಿಂದ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ ಜೂ.30 ಶುಕ್ರವಾರ ಕಾಲೇಜು ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಲಿದೆ ಎಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ರಾವ್ ಪಿ. ತಿಳಿಸಿದ್ದಾರೆ.
ಸೋಮವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1965 ರಲ್ಲಿ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜು ಆರಂಭಗೊಂಡಿದ್ದು ಪ್ರಸ್ತುತ ಸಮಾಜಮುಖಿಯಾಗಿ ಕಾಣಿಸಿಕೊಂಡಿದೆ. ಇಂದಿಗೂ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳೊಂದಿಗೆ ಸದಾ ಸಂಪರ್ಕದಲ್ಲಿರುವುದು ಸಂತಸದ ವಿಚಾರವಾಗಿದೆ. ಹಿರಿಯ ವಿದ್ಯಾರ್ಥಿಗಳ ನಿರಂತರ ಪ್ರೋತ್ಸಾಹಕ್ಕಾಗಿ ಹಿರಿಯ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಮುಂದೆಯೂ ಹಿರಿಯ ವಿದ್ಯಾರ್ಥಿಗಳ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿವಿ ವಿಶ್ರಾಂತ ಕುಲಪತಿ, ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ.ಪಿ.ಈಶ್ವರ ಭಟ್ ಪಾಲ್ಗೊಳ್ಳಲಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ರಾವ್ ಪಿ., ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಕೆ.ಎನ್., ಪ್ರಿನ್ಸಿಪಾಲ್ ಪ್ರೊ.ವಿಷ್ಣು ಗಣಪತಿ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ.ಮನಮೋಹನ ಎಂ. ಪಾಲ್ಗೊಳ್ಳಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ವಿ.ಬಿ.ಅರ್ತಿಕಜೆ, ಪ್ರೊ.ಅಚ್ಯುತ ಭಟ್, ಪ್ರೊ.ಜೆ.ಸುಂದರ ಭಟ್, ವಾಸುದೇವ ರಾವ್, ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಡಾ.ವೇಣುಗೋಪಾಲ ಶರ್ಮ, ಎಸ್‍ಎಲ್‍ಸಿ ಬುಕ್ಸ್ ಕಂಪೆನಿ ನಿರ್ದೇಶಕ ದಿವಾಕರ್ ದಾಸ್ ಅವರಿಗೆ ಗೌರವಾರ್ಪಣೆ ನಡೆಯಲಿದೆ. ವಿವಿ ಮಟ್ಟದ ರ್ಯಾಂಕ್ಮ ಚಿನ್ನದ ಪದಕ ಹಾಗೂ ನಗದು ಪುರಸ್ಕಾರಕ್ಕೆ ಭಾಜನರಾದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿಯ ವಾಮನ್ ಪೈ, ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ವಿ.ಜಿ.ಭಟ್, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ.ಮನಮೋಹನ ಎಂ. ಉಪಸ್ಥಿತರಿದ್ದರು.