ಪುತ್ತೂರು : ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶಾಲಾ ಕಾಲೇಜುಗಳಲ್ಲಿ ಅನೇಕ ಉದಯೋನ್ಮುಖ ಬರಹಗಾರರು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧಕರಿದ್ದು ಅವರನ್ನು ಗುರುತಿಸಿ ಸಾಹಿತ್ಯ ವೇದಿಕೆ ನೀಡುವ ನಿಟ್ಟಿನಲ್ಲಿ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಯುವ ಜನತೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ಉದ್ದೇಶ ಇದಾಗಿದೆ ಎಂದು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದರು.
ಅವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಶ್ರೀ ಷಣ್ಮುಖದೇವ ಪ್ರೌಢಶಾಲೆಯಲ್ಲಿ ಕ. ಸಾ. ಪ ಪುತ್ತೂರು, ಶಿಕ್ಷಣ ಇಲಾಖೆ ಪುತ್ತೂರು, ಗ್ರಾಮ ಪಂಚಾಯತ್ ಕೊಳ್ತಿಗೆ ಮತ್ತು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಸಾಹಿತ್ಯ ಸಂಭ್ರಮ-6 ಸರಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಷಣ್ಮುಖದೇವ ಪ್ರೌಢಶಾಲಾ ಅಧ್ಯಕ್ಷ ಶ್ರೀ ತೀರ್ಥಾನಂದ ದುಗ್ಗಳ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಏಳು ಸಾಧಕರನ್ನು
ಕೊಳ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಮ ಸುಂದರ ರೈ ಸನ್ಮಾನಿಸಿದರು. ಪ್ರದಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಉಪಸ್ಥಿತಿಯಲ್ಲಿ ಮಧು ಪ್ರಪಂಚ ಪತ್ರಿಕೆಯ ತ್ರೈಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಾಲ್ಕು ವಿವಿಧ ಗೋಷ್ಠಿಗಳು ನಡೆದವು.
ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕು. ಅಪೂರ್ವ ಕಾರಂತ್ ದರ್ಬೆ, ಆಶಾಮಯ್ಯ ಪುತ್ತೂರು, ಶ್ರೀಕಲಾ ಕಾರಂತ್ ಅಳಿಕೆ, ಕು. ನವ್ಯ ಪುತ್ತೂರು, ಸೌಮ್ಯರಾಮ್ ಕಲ್ಲಡ್ಕ ಅವರು ವಿವಿಧ ಗೋಷ್ಠಿ ಗಳನ್ನು ನಿರ್ವಹಿಸಿದರು.
ಶ್ರೀ ಷಣ್ಮುಖದೇವ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು, ಶಾಲಾ ಮುಖ್ಯ ಶಿಕ್ಷಕಿ ಕೃಷ್ಣವೇಣಿ ಸ್ವಾಗತಿಸಿದರು. ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಮಾಲೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕಿ ಪೂರ್ಣಿಮಾ ಪೆರ್ಲಂಪಾಡಿ ವಂದಿಸಿದರು.