ಪುತ್ತೂರು : ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚಾತುರ್ಮಾಸ ವೃತಾಚರಣೆಯ ಕುರಿತು ಪುತ್ತೂರು ವಲಯ ಸಮಿತಿ ವತಿಯಿಂದ ಸಭೆಯನ್ನು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಆಯೋಜಿಸಲಾಯಿತು.
ವಲಯ ಸಮಿತಿ ಅಧ್ಯಕ್ಷ ಡಾ.ಭಾಸ್ಕರ ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಡನೀರು ಶ್ರೀಗಳ ಚಾತುರ್ಮಾಸ ವೃತಾಚರಣೆಗೆ ಪುತ್ತೂರಿನಿಂದ ಬೃಹತ್ ಹೊರೆಕಾಣಿಕೆ ಸಮರ್ಪಣೆಯಾಗಲಿದ್ದು, ಈ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.
ಜು.3 ರಿಂದ ಸೆ.25ರ ವರೆಗೆ ಚಾತುರ್ಮಾಸ ನಡೆಯಲಿದ್ದು, ಜು.೧೦ ರಂದು ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಈ ಕುರಿತು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ರವಾಯಿತು. ಪುತ್ತೂರಿನ ಅಭಿಮಾನಿಗಳಿಂದ ವಿವಿಧ ಸಹಕಾರ, ಸಲಹೆ ಸೂಚನೆಗಳು ವ್ಯಕ್ತವಾದವು.
ಈ ಸಂದರ್ಭದಲ್ಲಿ ಎಡನೀರು ಶ್ರೀಗಳು ಆಶೀರ್ವಚನ ನೀಡಿ, ನಾಲ್ಕು ಪಕ್ಷಗಳ ರೂಪದಲ್ಲಿ ಪಕ್ಷಾಂತರಗೊಂಡು ಚಾತುರ್ಮಾಸ್ಯ ಆಚರಿಸಲ್ಪಡುತ್ತದೆ. ಈ ವರ್ಷ ಅಧಿಕ ಶ್ರಾವಣದ ಕಾಲದಿಂದಾಗಿ ಮೂರು ತಿಂಗಳ ಕಾಲ ಚಾತುರ್ಮಾಸ ನಡೆಯಲಿದೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಅಭಿಮಾನಿಗಳು ಪಾಲ್ಗೊಂಡು ಮಠದ ಆತಿಥ್ಯಕ್ಕೆ ಭಾಜನರಾಗಬೇಕು ಎಂದು ನುಡಿದ ಅವರು, ಹಿರಿಯ ಸ್ವಾಮೀಜಿಯವರ ಸಮಯದಲ್ಲಿ ಕೆಮ್ಮಾಯಿ ದೇವಸ್ಥಾನದಲ್ಲಿ ಚಾತುರ್ಮಾಸ ವಿಜೃಂಭಣೆಯಿಂದ ನಡೆದಿದೆ. ಅದೇ ಈ ಬಾರಿ ಶ್ರೀ ಮಠದಲ್ಲೂ ಧಾರ್ಮಿಕ ಪರಂಪರೆ ಉಳಿಸಿಕೊಂಡು ವೃತಾಚರಣೆ ನಡೆಯಲಿದೆ ಎಂದರು.
ಶ್ರೀ ಗುರುರಾಘವೇಂದ್ರ ಮಠದ ಕಾರ್ಯದರ್ಶಿ ಯು.ಪೂವಪ್ಪ ಮಾತನಾಡಿ, ಕಲ್ಲಾರೆ ಮಠಕ್ಕೂ, ಎಡನೀರು ಮಠಕ್ಕೂ ಬಹಳ ವರ್ಷಗಳ ಸಂಬಂಧವಿದೆ. ಹಿರಿಯ ಸ್ವಾಮೀಜಿಯವರ ಮೇಲೆ ಅಪಾರ ಗೌರವವಿದೆ. ಈ ನಿಟ್ಟಿನಲ್ಲಿ ಹೊರೆಕಾಣಿಕೆ ಸಮರ್ಪಣೆ ಮಾಡೋಣ ಎಂದು ಭಕ್ತರಲ್ಲಿ ವಿನಂತಿಸಿದರು.
ವೇದಿಕೆಯಲ್ಲಿ ಕೆಯ್ಯೂರು ನಾರಾಯಣ ಭಟ್, ಎಡನೀರು ಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದರು. ನಿವೃತ್ತ ಪ್ರಿನ್ಸಿಪಾಲ್ ಪ್ರೊ.ವೇದವ್ಯಾಸ್ ಸ್ವಾಗತಿಸಿದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ವಂದಿಸಿದರು. ಭಾಸ್ಕರ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಶ್ರೀಗಳ ಪಟ್ಟದ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು.