ಬೆಳ್ತಂಗಡಿ: ಸೌಜನ್ಯಾ ಅವರ ಸಮಾಧಿಯ ಬಳಿಯಲ್ಲೇ ಆಕೆಯ ಅತಿದೊಡ್ಡ ಪ್ರತಿಮೆಯನ್ನು ಸ್ಥಾಪಿಸುತ್ತೇವೆ ಎಂದು ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಕೆ ನಮಗೆ ಒಂದು ಶಕ್ತಿಯಾಗಲಿದ್ದಾಳೆ. ಆಕೆಯ ದೇವಸ್ಥಾನ ಮಾಡುತ್ತೇವೆ. ಆ ಮಾರ್ಗವಾಗಿ ಬರುವ ಭಕ್ತರು ಮಾತ್ರವಲ್ಲ,ಅತ್ಯಾಚಾರ ನಡೆಸಿ ಕೊಲೆ ಮಾಡಿದವರು ಕೂಡ ಅದನ್ನು ನಿತ್ಯವೂ ನೋಡಿಯೇ ಮುಂದೆ ಸಾಗುವಂತಾಗಬೇಕು ಎಂದು ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಸಿಬಿಐ ಕೋರ್ಟ್ ತೀರ್ಪಿನಲ್ಲಿ ಸಂತೋಷ್ ರಾವ್ ಆರೋಪಿ ಅಲ್ಲ ಎಂದು ಹೇಳಿರುವ ಬೆನ್ನಲ್ಲೇ ಮತ್ತೆ ಕರಾವಳಿಯಲ್ಲಿ ಪ್ರಕರಣ ಭಾರೀ ಮುನ್ನೆಲೆಗೆ ಬಂದಿದೆ.
ಪ್ರಕರಣದಲ್ಲಿ ತನಿಖಾಧಿಕಾರಿಗಳು, ಪೊಲೀಸರು ಮತ್ತು ವೈದ್ಯಕೀಯ ವರದಿ ನೀಡಿರುವ ವೈದ್ಯರು ಲೋಪ ಎಸಗಿರುವುದು ಸ್ಪಷ್ಟವಾಗಿದೆ. ಇವರ ವಿರುದ್ಧ ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ವಕೀಲೆ ಅಂಬಿಕಾ ಪ್ರಭು ತಿಳಿಸಿದ್ದಾರೆ.
ಸಂತೋಷ್ ರಾವ್ ಅವರ ಮಾನವ ಹಕ್ಕು ಉಲ್ಲಂಘನೆ ಆಗಿರುವ ಬಗ್ಗೆಯೂ ಪೊಲೀಸ್ ಇಲಾಖೆ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು. ಆರೋಪಿ ಸಂತೋಷ್ ರಾವ್ ತಪ್ಪಿತಸ್ಥ ಅಲ್ಲ ಎಂಬುದನ್ನು ನಾವು 10 ವರ್ಷ ಹಿಂದೆಯೇ ಹೇಳಿದ್ದೇವೆ. ಆದರೆ, ಪೊಲೀಸರು ಒತ್ತಡಕ್ಕೆ ಮಣಿದು ಸಂತೋಷ್ ರಾವ್ ಅವರನ್ನು ತಪ್ಪಿತಸ್ಥನಾಗಿಸಿ, ನಿಜವಾದ ಅಪರಾಧಿಗಳನ್ನು ರಕ್ಷಿಸಲು ವ್ಯವಸ್ಥೆ ಮಾಡಿಕೊಂಡಿದ್ದರು. ನಿಜ ಆರೋಪಿಗಳ ವಿರುದ್ಧದ ಎಲ್ಲಾ ಸಾಕ್ಷ್ಯಗಳನ್ನು ಹಂತಹಂತವಾಗಿ ನಾಶಪಡಿಸಿದ್ದರು ಎಂದು ಮಹೇಶ್ ಶೆಟ್ಟಿ ಆರೋಪಿಸಿದರು.
ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸ ಹೊರಟು ಹೋಗಿದೆ.ನಾನು ನಂಬಿರುವುದು ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪನನ್ನು.ಅವರು ನ್ಯಾಯ ಕೊಡಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.