ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆದ ಬಳಿಕ ಇದೀಗ ಪ್ರತಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಮುಂದಾಗಿದೆ. ಈ ಮೂಲಕ ಬಿಜೆಪಿಯಲ್ಲಿ ವಿರೋಧ ಪಕ್ಷ ನಾಯಕನ ಆಯ್ಕೆಗೆ ಮುಹೂರ್ತ ಕೂಡಿಬಂದಿದೆ.
ಮುಂದಿನ ತಿಂಗಳು ಜು. 3ರೊಳಗೆ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಲಾಗುವುದು ಎಂದು ಸಂಸದ ಡಿ. ವಿ. ಸದಾನಂದಗೌಡ ಮಾಹಿತಿ ನೀಡಿದ್ದಾರೆ.
ಗುರುವಾರ ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸದಾನಂದ ಗೌಡ, ಪ್ರತಿಪಕ್ಷ ನಾಯಕನ ಆಯ್ಕೆ ನಾವು ಮಾಡುವ ತೀರ್ಮಾನ ಅಲ್ಲ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ಗೆ ಸವಾಲು ಹಾಕುವ ವ್ಯಕ್ತಿ ಬೇಕು. ಅಂತಹ ಸೂಕ್ತ ನಾಯಕನನ್ನು ಕೊಡುತ್ತೇವೆ. ಅಳೆದು ತೂಗಿ ರಾಷ್ಟ್ರೀಯ ನಾಯಕರು ವಿಪಕ್ಷ ನಾಯಕನನ್ನು ಮಾಡುತ್ತಾರೆ ಎಂದರು. ಜು.3ರಿಂದ 10 ದಿನ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಜು.7ರಂದು ಸಿದ್ದರಾಮಯ್ಯನವರು ಈ ಅವಧಿಯ ಮೊದಲ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಅಧಿವೇಶನ ಆರಂಭಕ್ಕೂ ಮುನ್ನ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುವುದು.
ವಿಧಾನಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಸೂಕ್ತ ಎನ್ನುವುದು ಕಾರ್ಯಕರ್ತರ ಅಭಿಪ್ರಾಯಗಳಾವೆ. ಆದ್ರೆ, ಹೈಕಮಾಂಡ್ ಯತ್ನಾಳ್ ಅವರಿಗೆ ಮಣೆ ಹಾಕುವುದು ಅನುಮಾನ. ಸದನದಲ್ಲಿ ಸರಕಾರವನ್ನು ಎದುರಿಸಲು ಸಂಸದೀಯ ಪಟು ಆಗಿರಬೇಕು. ಹಣಕಾಸು, ನೀರಾವರಿ ಮತ್ತಿತರ ವಿಷಯಗಳ ಬಗ್ಗೆ ಆಳ ಜ್ಞಾನ ಹೊಂದಿರಬೇಕು. ಈ ಎಲ್ಲಾ ಜ್ಞಾನ ಬಸವರಾಜ್ ಬೊಮ್ಮಾಯಿ ಅವರಲ್ಲಿದೆ. ಹೀಗಾಗಿ ಹೈಕಮಾಂಡ್ ಬೊಮ್ಮಾಯಿ ಅವರನ್ನು ಪ್ರತಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ.