ಕೌಕ್ರಾಡಿ: ಜಮೀನು ಖಾತೆ ಬದಲಾವಣೆಗೆ ಲಂಚದ ಬೇಡಿಕೆಯಿಟ್ಟ ಕೌಕ್ರಾಡಿ ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕೊಕ್ಕಡ ನಿವಾಸಿಯೊಬ್ಬರು ಕೌಕ್ರಾಡಿ ಗ್ರಾಮದಲ್ಲಿ ಜಾಗದ 9/11 ಖಾತೆ ಬದಲಾವಣೆಗೆ 2017 ರಲ್ಲಿ ಅರ್ಜಿ ಸಲ್ಲಿಸಿದ್ದರು. ಖಾತೆ ಬದಲಾವಣೆ ಆಗದ ಹಿನ್ನಲೆಯಲ್ಲಿ 2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡಿದ್ದರು. ಆದರೂ ಬದಲಾವಣೆ ಆಗಿರಲಿಲ್ಲ. ಗ್ರಾಪಂ ಪಿಡಿಒ ಖಾತೆ ಬದಲಾವಣೆಗೆ 20 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಲೋಕಾಯುಕ್ತಕ್ಕೂ ದೂರು ನೀಡಿದ್ದರು.
ಜೂ.22 ರಂದು 20 ಸಾವಿರ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಪಿಡಿಒ ಅವರನ್ನು ಹಿಡಿದ್ದರು. ಬಳಿಕ ಪಿಡಿಒವನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ.ಸೈಮನ್ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಉಪಾಧೀಕ್ಷಕರುಗಳಾದ ಕಲಾವತಿ, ಚೆಲುವರಾಜು ಬಿ., ಪೊಲೀಸ್ ನಿರೀಕ್ಷಕ ಅಮಾನುಲ್ಲ, ಎ.ವಿನಾಯಕ ಬಿಲ್ಲವ
, ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪಿಡಿಒ ಮಹೇಶ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.