ಮುಖ್ಯ ಗರ್ಭಗುಡಿಗೆ ಚಿನ್ನದ ಲೇಪನ ಕಾರ್ಯ ; ದರ್ಶನಕ್ಕೆ ಬಾಲಾಲಯದ ವ್ಯವಸ್ಥೆ
ಹೈದರಾಬಾದ್: ಜಗತ್ಪ್ರಸಿದ್ಧ ತಿರುಪತಿ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು ಮುಂದಿನ ವರ್ಷ ಸುಮಾರು ತಿಂಗಳು ಮುಚ್ಚುವ ಸಾಧ್ಯತೆಯಿದೆ. ದೇವಸ್ಥಾನದ ಆಡಳಿತ ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತಿರುಪತಿ ತಿಮ್ಮಪ್ಪನ ದೇಗುಲದ ಆನಂದ ನಿಲಯಂ ಚಿನ್ನದ ಲೇಪನವನ್ನು ಬದಲಾಯಿಸಲು ಯೋಜಿಸಿದೆ. ಆನಂದ ನಿಲಯಂ ಅಂದರೆ ಗರ್ಭಗುಡಿಯ ಮೇಲಿರುವ ಮೂರು ಅಂತಸ್ತಿನ ಗುಮ್ಮಟದ ಆಕಾರದ ಗೋಪುರ. ಮುಖ್ಯ ದೇವಾಲಯದ ಪಕ್ಕದಲ್ಲಿ ತಾತ್ಕಾಲಿಕವಾಗಿ ತಿರುಪತಿ ವೆಂಕಟೇಶ್ವರ ದೇವರ ತದ್ರೂಪಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಲು ಯೋಜಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ ಮೊದಲ ವಾರದಲ್ಲಿ ಟ್ರಸ್ಟ್‌ನ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಗಮ ಶಾಸ್ತ್ರ ಸಲಹೆಗಾರರು, ಪುರೋಹಿತರು, ಸಿವಿಲ್ ಎಂಜಿನಿಯರ್‌ಗಳು ಮತ್ತು ಇತರ ತಜ್ಞರೊಂದಿಗೆ ಸುದೀರ್ಘ ಚರ್ಚೆ ಮತ್ತು ಸಮಲೋಚನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
1958ರಲ್ಲಿ ಆನಂದ ನಿಲಯಕ್ಕೆ ಚಿನ್ನದ ಲೇಪನ ಮಾಡಲಾಗಿತ್ತು. ಈ ಚಿನ್ನದ ಲೇಪನ ಮಾಡಲು ಸುಮಾರು ಎಂಟು ವರ್ಷ ಹಿಡಿದಿತ್ತು. ಕ್ರಿ.ಶ 839 ರಲ್ಲಿ ಪಲ್ಲವ ರಾಜ ವಿಜಯ ದಂತಿವರ್ಮನ್ ಅವರು ಮೊದಲ ಬಾರಿಗೆ ಚಿನ್ನದ ಲೇಪನವನ್ನು ಮಾಡಿದ್ದರು. ಲಭ್ಯವಿರುವ ದಾಖಲೆಗಳ ಪ್ರಕಾರ ಗೋಪುರದ ಚಿನ್ನದ ಲೇಪನವನ್ನು ಏಳು ಬಾರಿ ಬದಲಾಯಿಸಲಾಗಿದೆ..
ತಾತ್ಕಾಲಿಕ ದೇವಾಲಯ ಬಾಲಾಲಯದ ಕೆಲಸ ಫೆಬ್ರವರಿ 23 ರಂದು ಆರಂಭವಾಗಲಿದೆ. ಧಾರ್ಮಿಕ ನಿಯಮಗಳಂತೆ ಈ ತಾತ್ಕಾಲಿಕ ದೇವಾಲಯ ನಿರ್ಮಿಸಲಾಗುತ್ತದೆ. ಮೂಲ ದೇವಾಲಯದ ಮೇಲಿನ ಆನಂದ ನಿಲಯದ ಚಿನ್ನದ ಲೇಪನ ಪೂರ್ಣಗೊಳ್ಳುವ ತನಕ ಈ ವ್ಯವಸ್ಥೆ ಮುಂದುವರಿಯುತ್ತದೆ.
ಮೂಲ ದೇವಾಲಯವನ್ನು ಪುನಃಸ್ಥಾಪಿಸುವವರೆಗೆ, ಎಲ್ಲಾ ದೈನಂದಿನ ಆಚರಣೆಗಳನ್ನು ತಾತ್ಕಾಲಿಕ ದೇವಾಲಯದಲ್ಲಿ ಮಾಡಲಾಗುವುದು ಮತ್ತು ಭಕ್ತರಿಗೆ ದೇವರ ದರ್ಶನವನ್ನು ಇಲ್ಲೇ ಒದಗಿಸಲಾಗುವುದು.