ಪುತ್ತೂರು : ನಮ್ಮ ಸಂಘಟನೆಯ ನೇತೃತ್ವದಲ್ಲಿ ರಾಜ್ಯಪಾಲರ ಮನೆ ಮುಂದೆ ಅಮರಣಾಂತ ಉಪವಾಸ ಕೂತಾದರೂ ಮತಾಂತರ ಕಾಯಿದೆಯನ್ನು ಹಿಂಪಡೆಯುವುದನ್ನು ತಡೆಯುವುದಾಗಿ ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.
ಅವರು ಸೋಮವಾರ ಸಂಜೆ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ರಾಜ್ಯ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯಿದೆಯನ್ನು ಹಿಂಪಡೆಯುವುದರ ವಿರುದ್ಧ ವಿಶ್ವಹಿಂದು ಪರಿಷತ್ ಬಜರಂಗದಳದ ವತಿಯಿಂದ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು
ಹಿಂದಿನ ಬಿಜೆಪಿ ಸರಕಾರ ಜಾರಿತಂದ ಕಾಯಿದೆಯನ್ನು ಸಚಿವ ಸಂಪುಟದಲ್ಲಿ ಹಿಂಪಡೆಯುವ ನಿರ್ಣಯ ಮಾಡಿ ಸರಕಾರ ಪ್ರಯತ್ನ ಮಾಡಿದೆ. ಹಿಂದು ಸಮಾಜ ನಿದ್ದೆ ಮಾಡುತ್ತಿಲ್ಲ. ಉತ್ತರ ಕೊಡುವ ಹಿಂದು ಸಮಾಜವಾಗಿದೆ ಎಂದು ಎಚ್ಚರಿಸಲು ಪ್ರತಿಭಟನೆ ನಡೆಯುತ್ತಿದೆ. ಹಿಂದು ಸಮಾಜದ ಅಸ್ಮಿತೆಗೆ, ನಂಬಿಕೆಗಳಿಗೆ ದಕ್ಕೆ ಆದಾಗ ಎಲ್ಲರನ್ನು ಒಟ್ಟು ಸೇರಿಸಿ ಹೋರಾಟ ನಡೆಸಲಾಗುವುದು. ತಿರುಪತಿ ಉಳಿಸಲು ನಡೆದ ಹೋರಾಟ, ರಾಮಸೇತು ಭಂಗದ ವಿರುದ್ಧ ನಡೆದ ಹೋರಾಟ ಮಾದರಿಯಲ್ಲಿ ನಡೆಯಲಿದೆ ಎಂದು ಎಚ್ಚರಿಸಿದರು.
ಕಣಿಯೂರು ಶ್ರೀ ಚಾಮುಂಡೇಶ್ವರಿ ಮಠದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಮಾತನಾಡಿ, ಅವ್ಯಾಹತವಾಗಿ ಸರಕಾರದ ಒಪ್ಪಿಗೆ ಇದ್ದರೆ ಮತಾಂತರ ನಡೆದೇ ನಡೆಯುತ್ತದೆ. ಈಗಲೂ ನಡೆಯುತ್ತಿದೆ. ಗೋವುಗಳನ್ನು ಕಳ್ಳತನ ಮಾಡುವುದನ್ನು ತಡೆದವರ ವಿರುದ್ದವೇ ಕೇಸು, ಶಿಕ್ಷೆಯಾದರೆ ರಾಜ್ಯದ ಪರಿಸ್ಥಿತ ಏನಾಗಬಹುದು. ಹೀಗಾಗಿ ನಾವು ಎಚ್ಚೆತ್ತುಕೊಳ್ಳಬೇಕು. ನಮ್ಮ ಮನವಿ, ಯಾತನೆ, ಆಕ್ರೋಷ, ವೇದನೆಗಳನ್ನು ಸರಕಾರಕ್ಕೆ ಮುಟ್ಟಿಸಬೇಕು. ಪ್ರತಿಯೊಬ್ಬ ಸಂತರು ಒಟ್ಟಾಗಿ ಎಚ್ಚರಿಸಬೇಕು ಎಂದರು.
ವಿಶ್ವಹಿಂದು ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಸದಸ್ಯರಾದ ಹರೀಶ್ ಬಿಜತ್ರೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ನಗರ ಸಭಾ ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ, ಪೂಡಾ ಅಧ್ಯಕ್ಷ ಬಾಮಿ ಅಶೋಕ್ ಶೆಣೈ, ನಗರ ಸಭಾ ಸದಸ್ಯ ಮನೋಹರ್ ಕಲ್ಲಾರೆ, ಮಾಜಿ ಸದಸ್ಯ ರಾಜೇಶ್ ಬನ್ನೂರು, ಜನಾದನ ಬೆಟ್ಟ, ಜಯಂತಿ ನಾಯಕ್, ಪ್ರೇಮಲತಾ ರಾವ್, ಜಯಶ್ರೀ ಶೆಟ್ಟಿ, ಶ್ರೀಧರ ತೆಂಕಿಲ, ಕಿರಣ್ ಶೆಟ್ಟಿ, ದಿನೇಶ್ ಪಂಜಿಗ, ಪುನೀತ್ ಮಾಡತ್ತಾರು, ಸಚಿನ್ ಶೆಣೈ, ಹರೀಶ್ ದೋಳ್ಪಾಡಿ, ಅಜಿತ್ ರೈ ಹೊಸಮನೆ, ರಾಘವೇಂದ್ರ ಅಂದ್ರಟ್ಟ, ನಾಗೇಶ್ ಟಿ.ಎಸ್., ಮಧುಸೂದನ ಪಡ್ಡಾಯೂರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ನವೀನ್ ನೆರಿಯ ಸ್ವಾಗತಿಸಿದರು. ವಿಶಾಕ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.