ಬೀಜಿಂಗ್: ‘ಭಾರತದೊಂದಿಗೆ ‘ಸ್ಥಿರ ಮತ್ತು ಉತ್ತಮ ಬೆಳವಣಿಗೆ’ಯ ದ್ವಿಪಕ್ಷೀಯ ಸಂಬಂಧವನ್ನು ಹೊಂದಲು ಚೀನಾ ಸಿದ್ಧವಿದೆ’ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾನುವಾರ ಹೇಳಿದರು. ‘2020ರಿಂದ ಈಚೆಗೆ ಚೀನಾ–ಭಾರತ ಮಧ್ಯೆ ಉಲ್ಬಣಿಸಿರುವ ಗಡಿ ವಿವಾದ ಸಂಬಂಧ ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಎರಡೂ ದೇಶಗಳು ಬದ್ಧವಾಗಿದೆ’ ಎಂದೂ ಹೇಳಿದರು.
ಅಂತರರಾಷ್ಟ್ರೀಯ ಸ್ಥಿತಿಗತಿ ಮತ್ತು ಚೀನಾದ ವಿದೇಶಾಂಗ ಸಂಬಂಧ 2022 ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಭಾರತ ಹಾಗೂ ಚೀನಾವು ಯಾವಾಗಲೂ ರಾಜತಾಂತ್ರಿಕ ಮತ್ತು ಸೇನಾಮಟ್ಟದ ಸಂಪರ್ಕವನ್ನು ಕಾಯ್ದುಕೊಂಡಿವೆ’ ಎಂದರು. ಗಡಿ ವಿವಾದ ಬಗೆಹರಿಸುವ ಸಂಬಂಧ ಇದುವರೆಗೂ 17 ಸುತ್ತಿನ ಮಾತುಕತೆ ನಡೆದಿದೆ. ಚೀನಾದ ರಾಜತಾಂತ್ರಿಕ ಕೆಲಸಗಳ ಬಗ್ಗೆ ದೀರ್ಘ ಭಾಷಣ ಮಾಡಿದ ಅವರು, ಭಾರತ–ಚೀನಾ ಗಡಿ ವಿವಾದದ ಕುರಿತು ಕಡಿಮೆ ಮಾತನಾಡಿದರು. ಅಮೆರಿಕ–ಚೀನಾ ಸಂಬಂಧ, ಉಕ್ರೇನ್ ಯುದ್ಧದ ನಡುವೆಯೂ ರಷ್ಯಾದೊಂದಿಗೆ ಹೆಚ್ಚುತ್ತಿರುವ ಚೀನಾ ಸಂಬಂಧದ ಕುರಿತು ಮಾತನಾಡಿದರು.