ಪುತ್ತೂರು: ಕಠಿನ ಪರಿಶ್ರಮ ಮತ್ತು ಪರಿಪೂರ್ಣತೆ ಇದ್ದರೆ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು. ಈ ಹಾದಿಯಲ್ಲೇ ನಾನು ಸಾಗಿ ಬಂದಿದ್ದೇನೆ. ವಕೀಲ ವೃತ್ತಿ ಮಾಡುವವರು ಸಿದ್ಧತೆ ಹಾಗೂ ಓದಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟೀಸ್ ರಾಜೇಶ್ ರೈ ಕಲ್ಲಂಗಳ ಹೇಳಿದರು.
ವಕೀಲರ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಜಸ್ಟೀಸ್ ರಾಜೇಶ್ ರೈ ಕಲ್ಲಂಗಳ ಅವರಿಗೆ ಶನಿವಾರ ಪುತ್ತೂರು ನ್ಯಾಯಾಲಯದ ಪರಾಶರ ಸಭಾಂಗಣದಲ್ಲಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಏನಾದರೂ ಆಗು, ಮೊದಲು ಮಾನವನಾಗು ಎನ್ನುವ ಸಿದ್ಧಾಂತ ನಂಬಿದವ ನಾನು. ನ್ಯಾಯಾಧೀಶನಾಗಿಯೂ ಈ ದಿಸೆಯಲ್ಲಿಯೇ ನಾನು ಸಾಗಲಿದ್ದೇನೆ ಎಂದು ಹೇಳಿದ ಜಸ್ಟಿಸ್ ರಾಜೇಶ್ ರೈ, ಮನುಷ್ಯತ್ವ ಮತ್ತು ತೃಪ್ತಿ ಇರದಿದ್ದರೆ ನಮ್ಮ ಜೀವನ ಗುರುತಿಸಲ್ಪಡುವುದಿಲ್ಲ. ನನ್ನಲ್ಲಿ ಎಲ್ಲರೂ ಹೊಂದಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ನ್ಯಾಯಮೂರ್ತಿ ಜಸ್ಟಿಸ್ ರಾಜೇಶ್ ರೈ ಅವರ ಪರಿಚಯ ಮಾಡಿದ ಅವರ ಒಡನಾಡಿ ನ್ಯಾಯವಾದಿ ಸುರೇಶ್ ರೈ ಪಡ್ಡಂಬೈಲು, ಬಂಟ್ವಾಳ ಕೇಪು ಕಲ್ಲಂಗಳದ ರಾಜೇಶ್ ರೈ ಅವರು, ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನ ಪಡೆದ ಮೊದಲಿಗರು. ಯಕ್ಷಗಾನ ಪ್ರೇಮಿಯಾಗಿದ್ದು, ವಿಶ್ವವಿದ್ಯಾಲಯ ಮಟ್ಟದಲ್ಲೂ ಯಕ್ಷಗಾನದಲ್ಲಿ ಪ್ರತಿನಿಧಿಸಿದ್ದರು ಮತ್ತು ಬೆಂಗಳೂರಿನ ವಕೀಲ ಸಂಘದಲ್ಲೂ ಯಕ್ಷಗಾನವನ್ನು ಪಸರಿಸಿದವರು ಎಂದು ತಿಳಿಸಿದರು.
ಪುತ್ತೂರು ವಕೀಲರ ಸಂಘ ಹಾಗೂ ಪುತ್ತೂರು ನ್ಯಾಯಾಂಗದ ವತಿಯಿಂದ ಜಸ್ಟಿಸ್ ರಾಜೇಶ್ ರೈ ಕಲ್ಲಂಗಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಕಾರ್ಯಾಗಾರದಲ್ಲಿ ಸರ್ಕಂಸ್ಟಾನ್ಶಿಯಲ್ ಎವಿಡೆನ್ಸ್ ಕಾನೂನು ಮಾಹಿತಿ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಸರಿತಾ ಡಿ. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ಜತೆ ಕಾರ್ಯದರ್ಶಿ ಸೀಮಾ ನಾಗರಾಜ್ ಉಪಸ್ಥಿತರಿದ್ದರು. ನ್ಯಾಯಾಧೀಶರಾದ ಪ್ರಿಯಾ, ಶಿವಣ್ಣ, ಉಚ್ಛ ನ್ಯಾಯಾಲಯದ ನ್ಯಾಯವಾದಿ ವೆಂಕಟೇಶ್, ಹಿರಿಯ ನ್ಯಾಯಾಧೀಶರು, ಸರಕಾರಿ ಅಭಿಯೋಜಕರು ಪಾಲ್ಗೊಂಡರು.
ವಕೀಲರ ಸಂಘದ ಕಾರ್ಯದರ್ಶಿ ಚಿನ್ಮಯ್ ರೈ ಎನ್. ಸ್ವಾಗತಿಸಿ, ಕೋಶಾಧಿಕಾರಿ ಶ್ಯಾಮ್ ಪ್ರಸಾದ್ ಕೈಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ನ್ಯಾಯವಾದಿಗಳಾದ ಕುಂಬ್ರ ದುರ್ಗಾ ಪ್ರಸಾದ್ ರೈ ಹಾಗೂ ಭಾಸ್ಕರ ಕೋಡಿಂಬಾಳ ಕಾರ್ಯಕ್ರಮ ನಿರ್ವಹಿಸಿದರು.