ಪುತ್ತೂರು: ನೆಹರೂನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾದ ನ್ಯಾ. ರಾಜೇಶ್ ರೈ ಕಲ್ಲಂಗಳ ರವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಮಹಾವಿದ್ಯಾಲಯದ ಸಂಶೋಧನಾ ಜರ್ನಲ್ ಲೀಗಲ್ ಸ್ಪೆಕ್ಟ್ರಂ -4 ರ ಬಿಡುಗಡೆ ಸಮಾರಂಭ ಶನಿವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ನ್ಯಾ. ರಾಜೇಶ್ ರೈ ಕಲ್ಲಂಗಳ ರವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಶೋಧನಾ ಜರ್ನಲ್ ಲೀಗಲ್ ಸ್ಪೆಕ್ಟ್ರಂ -4 ರ ಬಿಡುಗಡೆ ಮಾಡಿ ಮಾತನಾಡಿ, ಕಾನೂನು ಮಹಾವಿದ್ಯಾಲಯದ ಸಂಶೋಧನಾ ಜರ್ನಲ್ ಲೀಗಲ್ ಸ್ಪೆಕ್ಟ್ರಂ ಹೆಸರೇ ಹೇಳುವಂತೆ ಕಾಮನಬಿಲ್ಲಿನಂತೆ ವಿಶಿಷ್ಟವಾಗಿದೆ. ಜೊತೆಗೆ ಈ ಜರ್ನಲ್ ಕಾನೂನು ಕ್ಷೇತ್ರದ ವಿವಿಧ ಆಯಾಮಗಳ ಕುರಿತು ಉತ್ತಮ ಗುಣಮಟ್ಟದ ಸಂಶೋಧನಾ ಪ್ರಬಂಧಗಳಿಂದ ಕೂಡಿದೆ. ಜಗತ್ತಿನಲ್ಲಿ ಕಾಮನಬಿಲ್ಲಿನ ಏಳು ಬಣ್ಣಗಳು ಯಾವ ರೀತಿ ಜಗತ್ತಿನ ಕತ್ತಲನ್ನು ಹೋಗಲಾಡಿಸಿ, ಬೆಳಕಿನಿಂದ ಬೆಳಗುತ್ತದೂ, ಅದೇ ರೀತಿ ಈ ಜರ್ನಲ್ ಹಾಗೂ ನಮ್ಮ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಬೆಳಗಲಿ ಎಂದು ಶುಭಹಾರೈಸಿದರು. ಜೊತೆಗೆ ಕಾನೂನು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳುವತೆ ಕರೆ ನೀಡಿದ ಅವರು, ಕಠಿಣ ಪರಿಶ್ರಮದ ಮೂಲಕ ಜ್ಞಾನರ್ಜನೆಗೆ ಹೆಚ್ಚಿನ ಒತ್ತು ನೀಡಿದಾಗ ಗೆಲುವು ನಮ್ಮದಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಶಾಸಕಾಂಗ, ಕಾರ್ಯಾಂಗಕ್ಕಿಂತಲೂ ಜನತೆ ನ್ಯಾಯಾಂಗದ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದ್ದು, ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನ್ಯಾಯಾಂಗದ ಭಾಗವಾಗಿರುವ ನ್ಯಾಯಾಮೂರ್ತಿಗಳಿಗಿದೆ ಎಂದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ. ರವೀಂದ್ರ ಪ್ರಾಸ್ತವಿಕವಾಗಿ ಮಾತನಾಡಿ,
ಕಾನೂನು ಮಹಾವಿದ್ಯಾಲಯದ ಸಂಶೋಧನಾ ಜರ್ನಲ್ ‘ಲೀಗಲ್ ಸ್ಪೆಕ್ಟ್ರಂ’ ಕುರಿತು ವಿವರಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಶಶಿಧರ್ ಬಿ ಎನ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ.ಎಂ. ಉಪಸ್ಥಿತರಿದ್ದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ. ಸ್ವಾಗತಿಸಿ, ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿರಾದ ಶ್ರೀಮತಿ ಸಂಗೀತಾ ಎಸ್ ಎಂ ವಂದಿಸಿದರು. ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸಂಧ್ಯಾ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು.