ಪುತ್ತೂರು: ಪುತ್ತೂರು: ಹಲಸಿನ ಹಣ್ಣುಗಳನ್ನು ಕೇಳುವವರೇ ಇಲ್ಲದ ಒಂದು ಕಾಲವಿತ್ತು. ಆದರೆ ಪ್ರಸ್ತುತ ಜಗತ್ತಿನಲ್ಲಿ ಹಲಸಿನ ಹಣ್ಣಿನ ಮೌಲ್ಯವರ್ಧನೆ ಜತೆಗೆ ವಿವಿಧ ರೀತಿಯ ಉತ್ಪನ್ನಗಳತ್ತ ಜನ ಆಕರ್ಷಿತರಾಗಿದ್ದಾರೆ ಎಂಬುದಕ್ಕೆ ಪುತ್ತೂರಿನಲ್ಲಿ ನವತೇಜ, ಬೆಂಗಳೂರು ಐಐಎಚ್ಆರ್ ಹಾಗೂ ಪುತ್ತೂರು ಜೆಸಿಐ ವತಿಯಿಂದ ನಗರದ ಜೈನಭವನದಲ್ಲಿ ಶನಿವಾರ ಉದ್ಘಾಟನೆಗೊಂಡ ಹಲಸು-ಹಣ್ಣು ಮೇಳ ಸಾಕ್ಷಿಯಾಯಿತು.
ಈ ಮೇಳದಲ್ಲಿ ಏನಿದೆ, ಏನಿಲ್ಲ ಎಲ್ಲವೂ ಇದೆ. ಕಳೆದ ನಾಲ್ಕೈದು ವರ್ಷಗಳಿಂದ ಹಲಸು ಮೇಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಮೇಳದಿಂದಾಗಿ ವರ್ಷದಿಂದ ವರ್ಷಕ್ಕೆ ಹಲಸಿನ ಮೌಲ್ಯಯುತ ಉತ್ಪನ್ನಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ.
ಶನಿವಾರ ಉದ್ಘಾಟನೆಗೊಂಡ ಹಲಸು-ಹಣ್ಣು ಮೇಳದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಹಲಸಿನ ಉತ್ಪನ್ನಗಳನ್ನು ತಯಾರಿಸುವ ವಿವಿಧ ಸಂಸ್ಥೆಗಳು, ಸಣ್ಣ ಸಣ್ಣ ಘಟಕಗಳ ಮಾಲಕರ ಗಡಣವೇ ಮೇಳದಲ್ಲಿ ತಮ್ಮ ಮಳಿಗೆಗಳನ್ನು ತೆರೆದಿವೆ. ಒಂದೆಡೆ ಹಲಸಿನ ಹಲಸಿನ ಉಂಡ್ಲಕಾಳು, ಚಿಪ್ಸ್ , ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ಸೇಮಿಗೆ, ಬನ್ಸ್, ಪವಾಲ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಐಸ್ ಕ್ರೀಂ, ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಹೀಗೆ ಹತ್ತು ಹಲಸು ಬಗೆಯ ಖಾದ್ಯಗಳನ್ನು ಸವಿಯುವ ಅವಕಾಶವನ್ನು ಹಲಸು ಪ್ರಿಯರಿಗೆ ಒಂದೇ ಸೂರಿನಡಿ ಒದಗಿಸಲಾಗಿದ್ದು, ಮೇಳಕ್ಕೆ ಆಗಮಿಸಿದವರ ಹಟ್ಟೆ ತಣಿಸಿತು. ಇನ್ನೊಂದೆಡೆ ಹಲಸಿನ ಹಣ್ಣಿನ ವಿವಿಧ ತಳಿಯ ಗಿಡಗಳು ಸಹಿತ ವಿವಿಧ ಹಣ್ಣಿನ ಗಿಡಗಳ ಮಾರಾಟ, ಪ್ರದರ್ಶನ ಆಕರ್ಷಣೆ ಕೇಂದ್ರವಾಗಿ ಹಲಸು ಪ್ರಿಯರ ಹೊಟ್ಟೆ ತಣಿಸಿತು.
ಇನ್ನೊಂದೆಡೆ ಹಲಸಿನ ವಿವಿಧ ತಳಿಯ ಗಿಡಗಳು, ವಿವಿಧ ಹಣ್ಣಿನ ಗಿಡಗಳು ಗ್ರಾಹಕರನ್ನು ತನ್ನತ್ತ ಕೈ ಬೀಸಿ ಕರೆಯಿತು. ಜತೆಗೆ ಹಲಸಿನ ಹಣ್ಣನ್ನು ತುಂಡರಿಸುವ ವಿವಿಧ ಸಾಧನಗಳು ಮೆಚ್ಚುಗೆಗೆ ಪಾತ್ರವಾಯಿತು.