ಜೂ.17-18 : ಪುತ್ತೂರು ಜೈನಭವನದಲ್ಲಿ ಹಲಸು ಮತ್ತು ಹಣ್ಣುಗಳ ಮೇಳ-2023” | ಹಲಸಿನ ಹಣ್ಣು ಸಹಿತ ವಿವಿಧ ಹಣ್ಣುಗಳ ಪ್ರದರ್ಶನ, ಮಾರಾಟ | ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಮಳಿಗೆ

ಪುತ್ತೂರು: ಪುತ್ತೂರು ನವತೇಜ ಟ್ರಸ್ಟ್, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಾಗೂ ಪುತ್ತೂರು ಜೆಸಿಐ ಸಂಯುಕ್ತ ಆಶ್ರಯದಲ್ಲಿ6ನೇ  “ಹಲಸು ಮತ್ತು ಹಣ್ಣುಗಳ ಮೇಳ-2023” ಜೂ.17 ಹಾಗೂ 18 ರಂದು ಪುತ್ತೂರು ಬೈಪಾಸ್ ರಸ್ತೆಯಲ್ಲಿರುವ ಜೈನ ಭವನದಲ್ಲಿ ನಡೆಯಲಿದೆ ಎಂದು ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೇಳದಲ್ಲಿ ಸುಮಾರು 30 ಕ್ಕೂ ಅಧಿಕ ಮಿಕ್ಕಿ ಹಲಸಿನ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಗಳ ಮಳಿಗೆಗಳಿವೆ. ಸ್ಥಳದಲ್ಲೇ ತಯಾರಿಸುವ ಹಲವು ಪಾರಂಪರಿಕ ತಿಂಡಿಗಳು ಜೊತೆಗೆ ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳ ಗಿಡಗಳು, ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿವಿಧ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ಹಲಸುಗಳನ್ನು ಸುಲಭವಾಗಿ ಕಟ್ಟ ಮಾಡುವ ಮೆಷಿನ್‍ಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಮೇಳದಲ್ಲಿ ಹಲಸಿನ ಹಣ್ಣಿನಿಂದ ತಯಾರಿಸಿದ ಹಲಸಿನ ಉಂಡ್ಲಕಾಳು, ಚಿಪ್ಸ್ , ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ಸೇಮಿಗೆ, ಬನ್ಸ್, ಪವಾಲ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಐಸ್ ಕ್ರೀಂ, ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಹೀಗೆ ಹತ್ತು ಹಲಸು ಬಗೆಯ ಖಾದ್ಯಗಳನ್ನು ಸವಿಯುವ ಅವಕಾಶವನ್ನು ಹಲಸು ಪ್ರಿಯರಿಗೆ ಒಂದೇ ಸೂರಿನಡಿ ಒದಗಿಸಲಾಗುವುದು ಎಂದು ಅವರು ತಿಳಿಸಿದರು.



































 
 

ಜೂ.17 ಶನಿವಾರ ಬೆಳಿಗ್ಗೆ 8.30 ಕ್ಕೆ ಮೇಳದಲ್ಲಿ ತೆರೆಯುವ ಮಳಿಗೆಗಳನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಉದ್ಘಾಟಿಸಲಿದ್ದು, 10 ಗಂಟೆಗೆ ಬೆಂಗಳೂರು ಐಐಎಚ್ ಆರ್ ನಿರ್ದೇಶಕ ಡಾ.ಸಂಜಯ ಕುಮಾರ್ ಸಿಂಗ್ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಪುತ್ತೂರು ಸುದಾನ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರು ಐಐಎಚ್ ಆರ್ ಪ್ರಾಜೆಕ್ಟ್ ಕೋಆರ್ಡಿನೇಟರ್ ಡಾ.ಪಿ.ಸಿ.ಪಾಟೇಲ್, ಪುತ್ತೂರು ನ್ಯಾಯವಾದಿ ಫಝ್ಲುಲ್ ರಹಿಮಾನ್, ವಲಯ ಜೆಸಿಐ ಕಾರ್ಯಕ್ರಮ ನಿರ್ದೇಶಕಿ ಜೇಸಿ ಅಕ್ಷತಾ ಗಿರೀಶ್, ರೋಟರಿ ಕ್ಲಬ್ ಪುತ್ತೂರು ಯುವ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ ಪಾಲ್ಗೊಳ್ಳಲಿದ್ದು, ಪುತ್ತೂರು ಜೆಸಿಐ ಅಧ್ಯಕ್ಷ ಸುಹಾಸ್ ಮರಿಕೆ ಉಪಸ್ಥಿತರಿರುವರು ಎಂದು ತಿಳಿಸಿದರು.

ಬಳಿಕ 11 ಗಂಟೆಗೆ ನಡೆಯುವ ಹಲಸು-ಸಂವಹನ ಸಮಾವೇಶದಲ್ಲಿ ಬೆಂಗಳೂರು ಐಐಎಚ್ ಆರ್ ವಿಜ್ಞಾನಿ ಡಾ.ಕರುಣಾಕರ್, ಬೆಂಗಳೂರು ಮಾ ಇಂಟಿಗ್ರೇಟರ್ಸ್ ನ ಅಶೋಕ್ ಕುಮಾರ್ ಕರಿಕ್ಕಳ, ಭಟ್ & ಭಟ್ ಯೂಟ್ಯೂಬ್ ಚಾನೆಲ್‍ನ ಸುದರ್ಶನ ಭಟ್ ಬೆದ್ರಾಡಿ, ಬೆಳ್ಳಾರೆ ಕುರಿಯಾಜೆ ಫಾರ್ಮ್ಸ್ ನ ಕುರಿಯಾಜೆ ತಿರುಮಲೇಶ್ವರ ಭಟ್, ಆಲಂಗಾರು ರಾಘವೇಂದ್ರ ನರ್ಸರಿಯ ಕೃಷ್ಣ ಕೆದಿಲಾಯ ಪಾಲ್ಗೊಳ್ಳಲಿದ್ದಾರೆ. ಸಮನ್ವಯಕಾರರಾಗಿ ವೇಣುಗೋಪಾಲ್ ಎಸ್‍.ಜಿ. ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಜೂ.18 ಭಾನುವಾರ ಸಂಜೆ 4 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪಾಲ್ಗೊಳ್ಳಲಿದ್ದು, ಸಾವಯವ ಕೃಷಿಕ ಎ.ಪಿ.ಸದಾಶಿವ ಮರಿಕೆ ಸಮಾರೋಪ ಭಾಷಣ ಮಾಡುವರು. ಅನಂತಪ್ರಸಾದ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಜೇಸಿಐ ಅಧ್ಯಕ್ಷ ಸುಹಾಸ್ ಮರಿಕೆ ಮಾತನಾಡಿ, ಕಾರ್ಯಕ್ರಮದಲ್ಲಿ ಹಲಸಿನ ಹಣ್ಣಿನ ಮೌಲ್ಯವರ್ಧನೆ ಕುರಿತು ಬಹಳಷ್ಟು ಚರ್ಚೆಗಳು ನಡೆಯಲಿವೆ. ಮೇಳದಲ್ಲಿ ಮುಖ್ಯವಾಗಿ ಕಾರ್ಕಳದ ಹಲಸಿನ ವಿವಿಧ ಖಾದ್ಯ ಸಹಿತ ಮಂಚೂರಿ ತಯಾರಿಕೆ ತಂಡ, ರಾಮಚಂದ್ರಾಪುರ ಮಠದಿಂದ ಹಲಸಿನ ಖಾದ್ಯ ತಯಾರಿಸುವ ಮಹಿಳೆಯರ ತಂಡವೊಂದು ಆಗಮಿಸಲಿದೆ. ಮೇಳದಲ್ಲಿ ಹಲಸಿನ ಕುರಿತು ಚಿತ್ರಕಲೆ, ಪ್ರಬಂಧ ಮುಂತಾದ ಹತ್ತು ಹಲವು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸ್ಥಳದಲ್ಲೇ ಬಹುಮಾನ ನೀಡಲಾಗುವುದು. ಒಟ್ಟಾರೆಯಾಗಿ ಹಲಸು ಮನೆ ಮನೆಯಲ್ಲಿ ಬಳಕೆ ಆಗಬೇಕು ಎಂಬ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಹಕಾರ ನೀಡುವ ಸಂಸ್ಥೆಗಳು :

ಕಾರ್ಯಕ್ರಮಕ್ಕೆ ಮಂಗಳೂರು ಭಾರತ ಅಟೋಕಾರ್ಸ್ ಪ್ರೈ.ಲಿ., ವಿಟ್ಲ ಪಿಂಗಾರ ರೈತೋತ್ಪಾದನಾ ಸಂಸ್ಥೆ,  ಪುತ್ತೂರು ಎಸ್‍ ಆರ್‍ ಕೆ. ಲ್ಯಾಡರ್ಸ್, ಸಾಯ ಎಂಟರ್ ಪ್ರೈಸಸ್‍, ಉಪ್ಪಿನಂಗಡಿ ಅಕ್ಷ ಕಾಟೇಜ್ ಇಂಡಸ್ಟ್ರೀಸ್, ಪುತ್ತೂರು ನವನೀತ ಫಾರ್ಮ್ ನರ್ಸರಿ, ಏಳ್ಮುಡಿ ಮರಿಕೆ ಸಾವಯವ ಮಳಿಗೆ ಹಾಗೂ ಪುತ್ತೂರು ಯುವ ರೋಟರಿ ಕ್ಲಬ್ ಸಹಕಾರ ನೀಡಲಿದೆ.

ಪತ್ರಿಕಾಗೋಷ್ಠಿಯಲ್ಲಿ ನವನೀತ್ ಫಾರ್ಮ್ ನರ್ಸರಿಯ ವೇಣುಗೋಪಾಲ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top