ಪುತ್ತೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುತ್ತೂರು ಕ್ಷಯರೋಗ ಚಿಕಿತ್ಸಾ ಘಟಕ ., ರಾಷ್ಟ್ರೀಯ ಕ್ಷಯ ನಿರ್ಮೂಲನಾ ಸಮಿತಿ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತ ರ ಸಂಘದ ವತಿಯಿಂದ ಕ್ಷಯಮುಕ್ತ ಭಾರತ-ಮಾಹಿತಿ ಶಿಬಿರ ಮಂಗಳವಾರ ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಒತ್ತಡದ ಧಾವಂತದಿಂದ ಪತ್ರಕರ್ತರು ತಮ್ಮ ಜೀವನ ಗೊನೆಗೊಳಿಸುವ ತನಕದ ಪರಿಸ್ಥಿತಿ ಉಂಟಾಗಿದೆ. ಕಳೆದ ಕೋವಿಡ್ ಸಂದರ್ಭದಲ್ಲಿ ಹಲವಾರು ಮಂದಿ ಪತ್ರಕರ್ತರು ಜೀವ ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಕಡೆ ಗಮನ ಹರಿಸುವ ಜತೆಗೆ ತಮ್ಮ ವೃತ್ತಿಯನ್ನು ಮಾಡಬೇಕು ಎಂದ ಅವರು, ಇಂದು ಅತೀ ದೊಡ್ಡ ಪಿಡುಗು ಕ್ಷಯರೋಗದ ಕುರಿತು ಮಾಹಿತಿ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ದ.ಕ.ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಮಾಹಿತಿ ನೀಡಿ, ಸುಮಾರು 6 ಸಾವಿರ ವರ್ಷಗಳ ಹಿಂದೆಯೇ ಕ್ಷಯರೋಗ (ಟಿಬಿ) ಕಾಣಿಸಿಕೊಂಡಿದ್ದು, ಆ ಸಂದರ್ಭದಲ್ಲಿ ಔಷಧಿ ಕಂಡುಕೊಳ್ಳಲಾಗಲಿಲ್ಲ. ಕ್ಷಯರೋಗ ರೋಗಿಯು ಸೀನು, ಕೆಮ್ಮು, ಉಗುಳುವ ಮೂಲಕ ಿನ್ನೊಬ್ಬರಿಗೆ ಹರಡುತ್ತದೆ. ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದ ಅವರು, ಪ್ರಸ್ತುತ ಕ್ಷಯರೋಗ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, 2030 ರ ವೇಳೆ ಕ್ಷಯರೋಗ ಮುಕ್ತ ಗುರಿ ಹೊಂದಲಾಗಿದೆ ಎಂದರು.
ಮಂಗಳೂರು ಕ್ಷಯರೋಗ ನಿಂತ್ರಣಾಧಿಕಾರಿ ಕಚೇರಿಯ ಮನೋಜ್ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಿದ್ಧಿಕ್ ನೀರಾಜೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ದ.ಕ.ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಸಂಘದ ಸದಸ್ಯ ಸುಧಾಕರ ತಿಂಗಳಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ವಂದಿಸಿದರು.