ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಘನ ತ್ಯಾಜ್ಯ ವಿಲೇವಾರಿ ಘಟಕದ ಶಿಲಾನ್ಯಾಸ ಕಾರ್ಯಕ್ರಮ ಡಿ. 24ರಂದು ದೇವಳದ ಆವರಣದಲ್ಲಿ ನಡೆಯಿತು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಭಾರತವನ್ನು ಕೃಷಿ ಪ್ರಧಾನ ರಾಷ್ಟ್ರವನ್ನಾಗಿ ಮಾಡಬೇಕೆಂದು ಮಹಾತ್ಮಾ ಗಾಂಧೀಜಿ ಕನಸು ಕಂಡಿದ್ದರು. ಆ ಕೆಲಸವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ. ಮೋದಿ ಅವರು ಸ್ವಚ್ಛ ಭಾರತ ಅಭಿಯಾನವನ್ನು ಶುರು ಮಾಡಿ, ಇಂದು ಸತ್ಯಮೇವ ಜಯತೇ ಧ್ಯೇಯವಾಕ್ಯದಂತೆ ಸ್ವಚ್ಛ ಭಾರತ ಅಭಿಯಾನ ಶುರು ಮಾಡಿದ್ದಾರೆ. ಪುತ್ತೂರಿನಲ್ಲಿ ಕಸದಿಂದ ಗ್ಯಾಸ್ ತಯಾರಿಕಾ ಘಟಕ ಸ್ಥಾಪನೆ ಮಾಡಲಿದ್ದೇವೆ. ನೆಲ, ಜಲ, ವಾಯು ಪರಿಶುದ್ಧವಾಗಿರಬೇಕು ಎಂಬ ನೆಲೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇದೀಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯಿಂದ ತ್ಯಾಜ್ಯ ವಿಲೇವಾರಿ ಮಾಡುವ ಕೆಲಸಕ್ಕೂ ಮುಂದಾಗಿದ್ದು, ಶ್ಲಾಘನೀಯ ಕಾರ್ಯ ಎಂದರು.
ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ದೇವಸ್ಥಾನದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸುತ್ತಿರುವುದು ಉತ್ತಮ ಕಾರ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಪ್ರಸಾದ್ ಮುಳಿಯ, ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎ ಗ್ರೇಡ್ ದೇವಸ್ಥಾನಗಳು 26 ಲಕ್ಷ ರೂ. ವೆಚ್ಚದ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಬೇಕಾಗಿದೆ. ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಸಗಳನ್ನು ವಿಂಗಡಿಸಿ, ಆ ತ್ಯಾಜ್ಯವನ್ನು ಮಾರಾಟ ಮಾಡಿ, ಅದರಿಂದ ಸಂಪನ್ಮೂಲ ವಸ್ತುಗಳನ್ನು ಪಡೆಯುತ್ತೇವೆ ಎಂದರು.
ತಾ.ಪಂ. ಇಓ ನವೀನ್ ಕುಮಾರ್ ಭಂಡಾರಿ, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ ಶುಭ ಹಾರೈಸಿದರು. ರವಿ ಸ್ವಾಗತಿಸಿದರು.