ಪುತ್ತೂರು: ದೇಶದ ಬಗೆಗೆ ಪ್ರತಿಯೊಬ್ಬರಲ್ಲೂ ಸದ್ಭಾವನೆ ಮೂಡಬೇಕು. ನಮ್ಮ ದೇಶದ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ಹೋರಾಡಬೇಕು.ಪರಸ್ಪರ ಪ್ರೀತಿ ಪ್ರೇಮ ವನ್ನು ಹಂಚಿಕೊಂಡು ಬಾಳಬೇಕು ಹಾಗೂ ಭವ್ಯ ಭಾರತವನ್ನು ಕಟ್ಟುವಲ್ಲಿ ಸಫಲರಾಗಿ ಸದೃಢ ಪ್ರಜೆಗಳಾಗಿ ಪ್ರಜ್ವಲಿಸಬೇಕು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ’ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘದ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇನ್ನೋರ್ವ ಅತಿಥಿ ನಿವೃತ್ತ ಸೇನಾಧಿಕಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ವಿವೇಕಾನಂದ ಸಂಸ್ಥೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಸಂಸ್ಥೆ. ನಮ್ಮ ಹಿರಿಯರು ಧಾರ್ಮಿಕ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಇದಕ್ಕಾಗಿ ಉತ್ತಮ ನಾಯಕನ ಅವಶ್ಯಕತೆಯಿದೆ. ನಾಯಕತ್ವ ಸರಿಯಾಗಿದ್ದರೆ ನಾವು ಕಲ್ಪಿಸಿದ ರಾಷ್ಟ್ರ ನಿರ್ಮಾಣ ಖಂಡಿತವಾಗಿಯೂ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಬೇಡದ ಸಂಗತಿಗಳನ್ನು ತೊಡೆದು ಹಾಕಿ ಬೇಕಾದ ಸಂಗತಿಗಳನ್ನು ಮಾತ್ರ ಇರಿಸಿಕೊಳ್ಳಬೇಕು. ಏನಾದರೂ ಸಾಧನೆ ಮಾಡಬೇಕಾದರೆ ಆಸಕ್ತಿ, ಕೌಶಲ್ಯ, ಪರಿಶ್ರಮದ ಜೊತೆಗೆ ಆತ್ಮವಿಶ್ವಾಸವೂ ಇರಬೇಕು. ಜೀವನದಲ್ಲಿ ಸೋತರೆ ಕುಗ್ಗದೆ ಮರಳಿ ಪ್ರಯತ್ನ ಮಾಡುತ್ತಲೇ ಇರಬೇಕು.ಪ್ರಯತ್ನದಿಂದ ಎಲ್ಲವೂ ಸಾಧ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ದತ್ತಿನಿಧಿ ಬಹುಮಾನವನ್ನು ಆಯ್ದ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ. ಎನ್, ಪ್ರಿನ್ಸಿಪಾಲ್ ವಿಷ್ಣುಗಣಪತಿ ಭಟ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ್ ಜೋಡುಕಲ್ಲು, ಕಾರ್ಯದರ್ಶಿ ರಕ್ಷಿತ್, ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ವಿಖ್ಯಾ ಸ್ವಾಗತಿಸಿ, ವಿದ್ಯಾರ್ಥಿ ಹರಿಪ್ರಸಾದ್ ವಂದಿಸಿದರು. ವಿದ್ಯಾರ್ಥಿನಿ ದಿವ್ಯಶ್ರೀ ವಜ್ರದುಂಬಿ, ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.