ಪುತ್ತೂರು: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಸರಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ “ಶಕ್ತಿ” ಯೋಜನೆಗೆ ಭಾನುವಾರ ನಗರದ ಕೋಟಿ-ಚೆನ್ನಯ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಕಿಕ್ಕಿರಿದು ತುಂಬಿದ ಮಹಿಳೆಯರು, ಸಾರ್ವಜನಿಕರು ಈ ಐತಿಹಾಸಿಕ ಯೋಜನೆಗೆ ಸಾಕ್ಷಿಯಾದರು.
ಉದ್ಘಾಟನೆಗೆ ಮುನ್ನ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಅತಿಥಿಗಳನ್ನು ಬ್ಯಾಂಡ್ ವಾದ್ಯದ ಮೂಲಕ ವೇದಿಕೆಗೆ ಕರೆ ತರಲಾಯಿತು. ಬಳಿಕ ದೀಪ ಬೆಳಗಿಸುವ ಮೂಲಕ ಶಾಸಕರು “ಶಕ್ತಿ” ಯೋಜನೆಗೆ ಚಾಲನೆ ನೀಡಿದರು.
ಸಮಾರಂಭದ ಉದ್ಘಾಟನೆ ಬಳಿಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಚೀಟಿ ವಿತರಿಸಲಾಯಿತು. ಬಳಿಕ ಬಲೂನು, ಹೂಗಳಿಂದ ಶೃಂಗರಿಸಿದ ಬಸ್ಸಿನಲ್ಲಿ ಮಹಿಳೆಯರನ್ನು ಕುಳ್ಳಿರಿಸಿಲಾಯಿತು. ಸಿಹಿ ತಿಂಡಿಗಳನ್ನು ಹಂಚಲಾಯಿತು. ಶಾಸಕ ಅಶೋಕ್ ಕುಮಾರ್ ಮಹಿಳೆಯರಿಗೆ ಉಚಿತ ಟಿಕೇಟ್ ವಿತರಿಸಿದರು. ಈ ಸಂದರ್ಭದಲ್ಲಿ ಕಿಕ್ಕಿರಿದು ತುಂಬಿದ ಮಹಿಳೆಯರು ಸರಕಾರದ ಪರ ಘೋಷಣೆಗಳನ್ನು ಕೂಗಿದರು. ಬಳಿಕ ಶಾಸಕರ ಸಹಿತ ಮಹಿಳೆಯರು ಬಸ್ ನಲ್ಲಿ ತೆರಳಿ ನಗರದಾದ್ಯಂತ ಸಂಚರಿಸಿ ಪುನಃ ಬಸ್ ನಿಲ್ದಾಣಕ್ಕೆ ಬರಲಾಯಿತು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಈ ರೀತಿಯ ಯೋಜನೆಯನ್ನು ಇದುವರೆಗೆ ಯಾವ ಸರಕಾರವೂ ಮಾಡಿಲ್ಲ. “ಉಚಿತ ಪ್ರಯಾಣ ನಮ್ಮ ಪ್ರಮಾಣ” ಎಂಬ ಧ್ಯೇಯ ವಾಕ್ಯದೊಂದಿಗೆ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆಯಾದ “ಶಕ್ತಿ” ಐತಿಹಾಸಿಕ ಯೋಜನೆಗೆ ಸಾಕ್ಷಿಯಾಯಿತು ಎಂದ ಅವರು, ರಾಜ್ಯ ಸರಕಾರದ ಯೋಜನೆಗಳು ಹಂತ ಹಂತವಾಗಿ ಸಾರ್ವಜನಕರಿಗೆ ನೀಡಲಾಗುವುದು. ಇದಕ್ಕಾಗಿ ಪೂರಕ ಸಿದ್ಧತೆಗಳು ಸರಕಾರದಿಂದ ನಡೆಯುತ್ತಿದೆ. ಮುಂದಿನ ಮೂರು ತಿಂಗಳುಗಳಲ್ಲಿ ಎಲ್ಲಾ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಸರಕಾರದ ವತಿಯಿಂದ ಆಗಲಿದೆ. ಇದೀಗ ಉಚಿತ ಪ್ರಯಾಣದಿಂದ ಪ್ರತೀ ಕುಟುಂಗಳಿಗೆ ತಿಂಗಳಿಗೆ 3 ರಿಂದ 5 ಸಾವಿರ ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಇದೊಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ., ತಹಶೀಲ್ದಾರ್ ಶಿವಶಂಕರ್, ಉಪಸ್ಥಿತರಿದ್ದರು. ಪದ್ಮಾವತಿ ಮತ್ತು ಬಳಗ ನಾಡಗೀತೆ ಹಾಡಿದರು. ಪುತ್ತೂರು ಉಪವಿಭಾಗದ ಘಟಕದ ಹಿರಿಯ ಘಟಕಾಧಿಕಾರಿ ಇಸ್ಮಾಯಿಲ್ ಸ್ವಾಗತಿಸಿದರು