ಬೆಂಗಳೂರು: ಕಾಂಗ್ರೆಸ್ ನ ದ್ವೇಷ ರಾಜಕಾರಣ ಮುಂದುವರಿದಿದ್ದು, ಅದನ್ನು ಎದುರಿಸಲು ಬಿಜೆಪಿ ಕಾರ್ಯಕರ್ತರನ್ನು ರಕ್ಷಿಸಲು ಕಾನೂನು ಸಹಾಯವಾಣಿ ತೆರೆಯಲಾಗಿದೆ. ಅದರ ಉದ್ಘಾಟನೆಯೂ ನೆರವೇರಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ಇಂದು ಹೆಲ್ಫ್ ಲೈನ್ ಉದ್ಘಾಟಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ದ್ವೇಷ ರಾಜಕೀಯ ಮಾಡುವ ಮುನ್ಸೂಚನೆ ಸಿಕ್ಕಿದ್ದು, ಈ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ.
ಹೋರಾಟದ ಮೂಲಕವೇ ಬಿಜೆಪಿ ಬೆಳೆದು ಬಂದಿದೆ. ಇನ್ನು ನಮ್ಮ ಕಾರ್ಯಕರ್ತರು ವಿಶ್ವಾಸ, ಧೈರ್ಯ ಕಳೆದುಕೊಳ್ಳಬಾರದು. ಪಕ್ಷದ ವತಿಯಿಂದ ಅನ್ಯಾಯ, ಅವ್ಯವಸ್ಥೆಯ ವಿರುದ್ಧ ಹೋರಾಟ ಮಾಡೋಣ ಎಂದ ಅವರು, ದೌರ್ಜನ್ಯ ನಡೆದರೆ, ಸುಳ್ಳು ಕೇಸು ಹಾಕಿದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಎಂದು ತಿಳಿಸಿದರು.
ರಾಜ್ಯದ ನೂರಕ್ಕೂ ಹೆಚ್ಚು ವಕೀಲರು ಈ ಸಹಾಯವಾಣಿಯ ನಿರ್ವಹಣೆ ಮಾಡಲು ಸಹಕರಿಸಿರುತ್ತಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಿಸಿ ರೌಢಿ ಶೀಟರ್ ಆಗಿ ದಾಖಲಿಸುವ ಪ್ರಕ್ರಿಯೆ ನಡೆದಿದೆ. ಕಾಂಗ್ರೆಸ್ ಸರಕಾರದ ಈ ಕ್ರಮವನ್ನು ಗಮನಿಸಿ ಕಾರ್ಯಕರ್ತರ ನೆರವಿಗೆ ಬರುವ ದೃಷ್ಟಿಯಿಂದ ಸಹಾಯವಾಣಿ ರಚನೆಯಾಗಿದೆ ಎಂದರು.
ಕಾನೂನು ಪ್ರಕೋಷ್ಟರ ಸಂಚಾಲಕ ಯೋಗೇಂದ್ರ ಹೂಡಾಘಟ್ಟ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನಾತ್ಮಕವಾಗಿ ನಮ್ಮ ಕಾರ್ಯಕರ್ತರನ್ನು ಕಟ್ಟಿ ಹಾಕುವ ಕೆಲಸಕ್ಕೆ ಮುಂದಾಗಿದೆ. ನಮ್ಮ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಹಾಯವಾಣಿ ತೆರೆಯಲಾಗಿದೆ ಎಂದರು.