ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಮತ್ತು ಜನ ಜಾಗೃತಿ ಜಾಥಾ

ಪುತ್ತೂರು: ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಾಗೂ ಇತರೇ ಪ್ರಕಾರದ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ 2012ರಲ್ಲಿ ಜಾರಿಗೆ ಬಂದಿದ್ದೇ ಪೋಕ್ಸೋ ಕಾಯ್ದೆ. ಅದು ಯಶಸ್ವಿಯಾಗಬೇಕಾದರೆ ಅದರ ಕುರಿತು ಮಾಹಿತಿಯನ್ನು ಸಮಾಜದ ಎಲ್ಲರಿಗೂ ತಿಳಿಸಬೇಕಾದ ಅನಿವಾರ್ಯತೆಯಿದೆ ಎಂದು ವಕೀಲ ಶ್ಯಾಮ್ ಪ್ರಸಾದ್ ಕೈಲಾರ್ ಹೇಳಿದರು.

ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು ನೆರವು ಘಟಕದ ವತಿಯಿಂದ ನಡೆದ ವಿಶೇಷ ಉಪನ್ಯಾಸ ಮತ್ತು ಜನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012ರ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, 2012 ಮಕ್ಕಳ ವಿರುದ್ಧ ವ್ಯಾಪಕವಾದ ಲೈಂಗಿಕ ಅಪರಾಧಗಳನ್ನು ದಾಖಲಿಸುವ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪರಿಹಾರವನ್ನು ತಿಳಿಸುತ್ತದೆ. ಪೋಕ್ಸೋ ಕಾಯ್ದೆ 2012ನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವರ್ತನೆಗಳಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ, ಮಕ್ಕಳ ಹಿತಾಸಕ್ತಿ ಮತ್ತು ಒಳಿತಿನ ರಕ್ಷಣೆಗಾಗಿ ಜಾರಿಗೆ ತರಲಾಗಿತ್ತು. ಈ ಕಾಯ್ದೆಯು 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಯಾವುದೇ ವ್ಯಕ್ತಿಯನ್ನು ‘ಮಗು’ ಎಂದು ವ್ಯಾಖ್ಯಾನಿಸುತ್ತದೆ. ಆ ಮಗುವಿನ ದೈಹಿಕ ಆರೋಗ್ಯ, ಭಾವನಾತ್ಮಕ, ಭೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಪ್ರತೀ ಹಂತದಲ್ಲಿಯೂ ಆದ್ಯತೆ ನೀಡಿ ಖಾತ್ರಿಪಡಿಸುತ್ತದೆ ಎಂದರು.



































 
 

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, 2021ರಲ್ಲಿ 31,677 ಅತ್ಯಾಚಾರ ಪ್ರಕರಣಗಳು, ಅದರ 3 ಪಾಲು ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಭಾರತದ ಮೌಲ್ಯಯುತ ದೇಶದಲ್ಲಿ ಇಂತಹ ವಿಚಾರಗಳು ಕಳವಳಕಾರಿಯಾಗಿದೆ. ಇಂತಹ ಪ್ರಕರಣಗಳ ವಿರುದ್ಧ ಈಗ ಜನಜಾಗೃತಿ ಮತ್ತು ಸಾರ್ವಜನಿಕ ಖಂಡನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಂದ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದರು.

 ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು ನೆರವು ಘಟಕದ ಸಂಯೋಜಕಿ ಕು. ಶ್ರೀರಕ್ಷಾ, ವಿದ್ಯಾರ್ಥಿ ಸಂಯೋಜಕ ವೀಕ್ಷಿತ್ ಸಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಹಿತೇಶ್ ಶೆಟ್ಟಿ ಸ್ವಾಗತಿಸಿ, ವಿವೇಕ್ ಮನೋಜ್ ವಂದಿಸಿದರು. ವಿದ್ಯಾರ್ಥಿನಿ ಜ್ಯೋತಿಕಾ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಂದ ಸಾಮಾಜಿಕ ಕಳಕಳಿಯ ಜಾಥಾ

ಸಭಾ ಕಾರ್ಯಕ್ರಮದ ನಂತರ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೆರೆ ಸಂರಕ್ಷಣೆ, ಉರಿಗೊಂದು ವನ ಹಾಗೂ ಲೈಂಗಿಕ ದೌರ್ಜನ್ಯ ಕುರಿತು ವಿಶೇಷ ಸಾಮಾಜಿಕ ಕಳಕಳಿಯ ಜಾಥಾವನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅವರಣದಿಂದ ಪುತ್ತೂರಿನ ನಗರ ವೃತ್ತದವರೆಗೆ ನಡೆಸಿದರು. ಈ ವಿಶೇಷ ಜಾಥಾಕ್ಕೆ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಚಾಲನೆ ನೀಡಿದರು. ಕೆರೆ ಸಂರಕ್ಷಣೆ, ಉರಿಗೊಂದು ವನ ಹಾಗೂ ಲೈಂಗಿಕ ದೌರ್ಜನ್ಯ ವಿರೋಧಿ ಘೋಷಣೆಗಳನ್ನು ಕೂಗಿದರಲ್ಲದೆ, ವಿಶೇಷ ಬರಹಗಳನ್ನು ಪ್ರದರ್ಶಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top