ಪುತ್ತೂರು: ಆಧುನಿಕತೆಯ ವೇಗಕ್ಕೆ ಸಂಸ್ಕಾರ ಪಾಠಗಳು ಮೂಲೆಗುಂಪಾಗುತ್ತಿವೆ ಎನ್ನುವ ಆತಂಕದ ನಡುವೆ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಭರವಸೆಯ ಸೆಲೆಯಾಗಿ ಟಿಸಿಲೊಡೆದಿದೆ.
ಪುತ್ತೂರು – ಉಪ್ಪಿನಂಗಡಿ ಟ್ವಿನ್ ಸಿಟಿಯ ನಡುವಿನ ಬನ್ನೂರು ಪುತ್ತೂರು ಪೇಟೆಗೆ ಕೂಗಳತೆಯ ದೂರದಲ್ಲಿದೆ. ಇಲ್ಲಿನ ಅಲುಂಬುಡ ಪ್ರದೇಶದಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ತಲೆಎತ್ತಿದೆ.
ಪಟ್ಟಣದ್ದೇ ವಾತಾವರಣ ಆದರೆ ತೋಟದ ನಡುವೆ ಶಾಲೆ. ಹೇಗಿರಬಹುದು ನೀವೇ ಊಹಿಸಿ. ಕಣ್ಣು ಸುಸ್ತಾಗಿ ಹೊರ ನೋಡಿದರೆ ಹಚ್ಚ ಹಸುರಿನ ಪರಿಸರ ಕಣ್ಣಿಗೆ ಇಂಪು. ದಿನವಿಡೀ ಸ್ವಚ್ಛ ಗಾಳಿ. ಇಂತಹ ಸುಂದರ ಪರಿಸರದ ನಡುವೆ ಪುಟ್ಟ ದೇಗುಲದಂತಿರುವ ಶಾಲೆ. ಶಿಕ್ಷಣವನ್ನೇ ತಪಸ್ಸು ಎಂಬಂತೆ ಧಾರೆ ಎರೆಯುವ ಶಿಕ್ಷಕರು, ಆಡಳಿತ ಮಂಡಳಿ. ಪಾಠದ ಜೊತೆಗೆ ಭಾರತೀಯ ಸಂಸ್ಕಾರವನ್ನು ವಿದ್ಯಾರ್ಥಿಗಳ ಜೀವನದೊಂದಿಗೆ ಹಾಸುಹೊಕ್ಕಾಗಿಸಬೇಕು ಎಂಬ ಸಂಕಲ್ಪ ಹೊಂದಿರುವ ಎವಿಜಿ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್. ಓರ್ವ ಮಗು ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಲು ಇದಕ್ಕಿಂತ ಹೆಚ್ಚು ಇನ್ನೇನು ಬೇಕು?
ಎವಿಜಿ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ದೂರದೃಷ್ಟಿ:
ರಾಷ್ಟ್ರ ಜಾಗೃತಿ, ಪರಿಸರ ಜಾಗೃತಿ ಮತ್ತು ಮಾನವೀಯತೆಯ ಜಾಗೃತಿ ಸಹಿತವಾದ ಮನೋಭಾವನೆಯೊಂದಿಗೆ ಪರಮೋಚ್ಛ ರಾಷ್ಟ್ರಚಿಂತನೆಯೊಂದಿಗೆ ಎಳೆಯರನ್ನು ಬೆಳೆಸುವ ಸಂಕಲ್ಪದೊಂದಿಗೆ ಎವಿಜಿ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರ ಮೊದಲು ಎಂಬ ಮೌಲ್ಯವನ್ನು ಮಕ್ಕಳಲ್ಲಿ ಮತ್ತು ಸಮಾಜದಲ್ಲಿ ಬಿತ್ತುವ ದೂರದೃಷ್ಟಿಯನ್ನಿಟ್ಟುಕೊಂಡಿದೆ ಟ್ರಸ್ಟ್.
ಕಾರ್ಯವಿಧಾನ:
ಅನ್ಯಾನ್ಯ ಕಾರ್ಯಚಟುವಟಿಕೆಗಳ ಮೂಲಕ ರಾಷ್ಟ್ರಭಕ್ತಿ, ಪರಿಸರ ಪ್ರೇಮ ಮತ್ತು ಮಾನವೀಯತೆಯ ಜಾಗೃತಿಗಳನ್ನು ನೆಲೆಗೊಳಿಸುವ ನಿಟ್ಟಿನಲ್ಲಿ ವಿದ್ಯಾಸಂಸ್ಥೆ ಕಾರ್ಯತತ್ಪರವಾಗಲಿದೆ. ಮಹಾನ್ ಭಾರತದ ನೈಜ ಆಂತರಿಕ ನೋಟಗಳನ್ನು ಮಕ್ಕಳಿಗೆ ತಿಳಿಸಿಕೊಡುವುದಕ್ಕಾಗಿ ಸ್ಪರ್ಧೆ, ಕಾರ್ಯಾಗಾರ, ತರಬೇತಿಗಳನ್ನು ಆಯೋಜಿಸುವುದು. ದೈನಿಕವಾಗಿ ನಮ್ಮ ಭಾರತೀಯ ಸಂವಿಧಾನದ ಪೀಠಿಕೆಯನ್ನು ಪಠಿಸುವ ಕೆಲಸ ಇಲ್ಲಿ ನಡೆಯಲಿದೆ.
ಎವಿಜಿ ವಿದ್ಯಾಸಂಸ್ಥೆಯಲ್ಲೇನಿದೆ?
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಗಮನದಲ್ಲಿಟ್ಟುಕೊಂಡು ಬೋಧನೆ ಮಾಡಲಾಗುತ್ತದೆ. ಮಕ್ಕಳಿಗೆ ಶ್ಲೋಕಗಳು, ರಾಷ್ಟ್ರೀಯ ಗೀತೆಗಳು, ನಾಡಗೀತೆಗಳ ಗಾಯನ, ಭಾರತೀಯ ಸಂವಿಧಾನದ ಪೀಠಿಕೆ, ಸ್ಥಳೀಯ ಚರಿತ್ರೆ, ಭಾರತ ರಾಷ್ಟ್ರೀಯ ಚರಿತ್ರೆ, ಪ್ರಚಲಿತ ವಿದ್ಯಮಾನಗಳು, ಜನಪದೀಯ ಜ್ಞಾನ, ರೋಬೋಟಿಕ್ಸ್, ಡ್ರೋನ್, ಕೋಡಿಂಗ್, ನೈಮಿತ್ತಿಕ ಶಿಷ್ಟಾಚಾರಗಳು, ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತು ನೈರ್ಮಲ್ಯ, ಶುದ್ಧ ಉಚ್ಚಾರಣೆ, ಸ್ವಚ್ಛ ಬರಹ, ಸ್ಪಷ್ಟ ಆಲಿಸುವಿಕೆ, ಸಮಸ್ಯೆಗಳನ್ನು ಬಿಡಿಸುವುದು, ಅಬಾಕಸ್, ವೇದ ಗಣಿತ, ಯಕ್ಷಗಾನ ಮೊದಲಾದ ಕಲಿಕೆಗಳು ಇಲ್ಲಿನ ಆದ್ಯತಾ ಪಟ್ಟಿಯಲ್ಲಿದೆ.
ಎವಿಜಿ ವಿದ್ಯಾಸಂಸ್ಥೆಯ ವಿಶೇಷತೆಗಳು:
ಶಿಶುಕೇಂದ್ರಿತ ಶಿಕ್ಷಣ
ಸೋಲುವುದನ್ನು ಕಲಿಸಿ ಮಕ್ಕಳು ಸಮಾಜದ ವಾಸ್ತವಿಕತೆಗೆ ಒಡ್ಡಿಕೊಳ್ಳುವಂತೆ ಮಾಡಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು
ಪ್ರತಿ ಮಗುವಿಗೆ ಕರಿಹಲಗೆ ಬಳಸುವ ಅವಕಾಶ
ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಪರಿಚಯಿಸುವುದು
ಭಾರತೀಯ ಸಂವಿಧಾನದ ಕುರಿತಾಗಿ ಸ್ಪಷ್ಟ ಜ್ಞಾನವನ್ನು ನೀಡುವುದು
ಪ್ರತಿ ಮಗುವಿಗೆ ವೈಯಕ್ತಿಕ ಗಮನ
ಮಗುವಿನ ಪ್ರಗತಿಯ ವರದಿಯನ್ನು ನೈಮಿತ್ತಿಕವಾಗಿ ನೀಡುವುದು
ಶಾಲೆಯಲ್ಲಿಯೇ ಮಕ್ಕಳಿಗೆ ಮತ್ತು ಸಿಬ್ಬಂದಿಗೆ ಶುಚಿ ರುಚಿಯಾದ ಸರಳ ಆಹಾರದ ವ್ಯವಸ್ಥೆ.
ಪೋಷಕರು, ಹಿರಿಯರು ಮತ್ತು ಶಿಕ್ಷಕರನ್ನು ಗೌರವಿಸುವ ಪ್ರಕಾರಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು.
ಒತ್ತಡ ರಹಿತ ಕಲಿಕೆ.
ಸೌಲಭ್ಯಗಳು:
ಶಾಲಾ ವಾಹನ, ಸುಸಜ್ಜಿತ ಸ್ಮಾರ್ಟ್ ಬೋರ್ಡ್, ಆಕರ್ಷಕ ಪೀಠೋಪಕರಣ, ಶುದ್ಧ ಕುಡಿಯುವ ನೀರು, ಆಟದ ಮೈದಾನಗಳು ಈಗಾಗಲೇ ಸಜ್ಜುಗೊಂಡಿವೆ. ಮಕ್ಕಳಿಗೆ ಲಘು ಉಪಾಹಾರ ಮತ್ತು ಮಧ್ಯಾಹ್ನದ ಊಟಗಳನ್ನು ಶಾಲೆಯಲ್ಲಿಯೇ ನೀಡುವ ವ್ಯವಸ್ಥೆಯೂ ಇಲ್ಲಿದೆ.
ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶೋತ್ಸವ:
ಜೂನ್ 5ರಂದು ಬೆಳಿಗ್ಗೆ 9.30ಕ್ಕೆ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲಿನ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜೂನ್ 4ರಂದು ಸಂಜೆ 6ರ ನಂತರ ವಾಸ್ತು ಪೂಜೆ ನಡೆಯಲಿದೆ. ಜೂನ್ 5ರಂದು ಬೆಳಿಗ್ಗೆ 7ಕ್ಕೆ ಗಣಹೋಮ, ಸರಸ್ವತಿ ಪೂಜೆ, 9.30ಕ್ಕೆ ತರಗತಿಗೆ ವಿದ್ಯಾರ್ಥಿಗಳ ಪ್ರವೇಶೋತ್ಸವ, 10ರಿಂದ ಶ್ರೀ ಸತ್ಯನಾರಾಯಣ ಪೂಜೆ, 11.30ಕ್ಕೆ ದೀಪ ಪ್ರಜ್ವಲನೆ, 11.45ರಿಂದ ಶೈಕ್ಷಣಿಕೆ ಚಿಂತನೆ, ಮಧ್ಯಾಹ್ನ 12ಕ್ಕೆ ಎವಿಜಿ ಇಂಗ್ಲೀಷ್ ಮೀಡಿಯಂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 1ರಿಂದ ಸಹಭೋಜನ ನಡೆಯಲಿದೆ.
ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಶಿಕ್ಷಣ ತಜ್ಞ, ಪುತ್ತೂರಿನ ಮಕ್ಕಳ ಮಂಟಪದ ನಿರ್ದೇಶಕ ಡಾ. ಎನ್. ಸುಕುಮಾರ ಗೌಡ ದೀಪೋಜ್ವಲನೆ ಮಾಡಲಿದ್ದಾರೆ. ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಉಪ್ಪಿನಂಗಡಿ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಮುಖ್ಯಅತಿಥಿಯಾಗಿರುವರು ಎಂದು ಪ್ರಕಟಣೆ ತಿಳಿಸಿದೆ.