ಪುತ್ತೂರು:ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ಕಳೆದ 30 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಹಾಲು ಶೀಥಲೀಕರಣ ಕೇಂದ್ರ ಸ್ಥಗಿತಗೊಂಡಿದ್ದು, ಪುತ್ತೂರಿನ ಬೃಹತ್ ಸಂಸ್ಥೆಯೊಂದು ಇತಿಹಾಸ ಪುಟ ಸೇರಲಿದೆ
ಎಪಿಎಂಸಿ ಪ್ರಾಂಗಣದಲ್ಲಿ ಕಾರ್ಯಾಚರಿಸುತ್ತಿದ್ದ ಹಾಲು ಶೀಥಲೀಕರಣ ಕೇಂದ್ರವನ್ನು 1992 ರಲ್ಲಿ ಜಿಡೆಕಲ್ಲಿನಲ್ಲಿ ಆರು ಎಕರೆ ಜಾಗದಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಸುಸಜ್ಜಿತ ಕಟ್ಟಡದಲ್ಲಿ ಕಳೆದ 30 ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ಕಾರ್ಯಾಚರಿಸುತ್ತಾ ಬಂದಿತ್ತು.
ಈ ಘಟಕದಲ್ಲಿ ದಿನವಹಿ 50 ಸಾವಿರ ಲೀಟರ್ ಹಾಲು ಶೀಥಲೀಕರಣಗೊಳಿಸುವ ಮೂರು ಬೃಹತ್ ಟ್ಯಾಂಕ್ ಗಳಿದ್ದು, ಇದಕ್ಕೆ ಪೂರಕವಾಗಿ ಯಂತ್ರೋಪಕರಣ, ಜನರೇಟರ್, ಕಂಪ್ರೆಷರ್ ನ್ನು ಹೊಂದಿದೆ. ಘಟಕ ಸ್ಥಾಪನೆಯಾದ ಆರಂಭದಲ್ಲಿ 30 ಸಿಬ್ಬಂದಿಗಳು ಕಾರ್ಯಾಚರಿಸುತ್ತಿದ್ದರು. ಪ್ರಸ್ತುತ 17 ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದರು. ಈ ಪೈಕಿ ನಾಲ್ಕು ಮಂದಿ ಮಾತ್ರ ಖಾಯಂ ಸಿಬ್ಬಂದಿಯಾಗಿದ್ದರು. ಉಳಿದ 13 ಮಂದಿ ತಾತ್ಕಾಲಿಕ ಸಿಬ್ಬಂದಿಯಾಗಿದ್ದಾರೆ.
ಇದೀಗ ಜೂನ್ 1 ರಿಂದ ಘಟಕ ಸಂಪೂರ್ಣ ಸ್ಥಗಿತಗೊಂಡಿದೆ. ಇಲ್ಲಿಯ ಸಿಬ್ಬಂದಿಗಳನ್ನು ಮಂಗಳೂರಿನ ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳು ಆದೇಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ.