ಬೆಂಗಳೂರು : ಕೊರೊನಾ ಒಮಿಕ್ರಾನ್ ರೂಪಾಂತರಿ ತಳಿ BF.7 ತೀವ್ರವಾಗಿ ಹರಡುತ್ತಿರುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ) ಇಂದಿನಿಂದ ಅನ್ವಯವಾಗುವಂತೆ ಶಾಲೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ನೆಗಡಿ, ಕೆಮ್ಮು, ಜ್ವರ ಕಂಡುಬಂದರೆ ರಜೆ ನೀಡಬೇಕು. ಶಾಲಾ ಆವರಣದಲ್ಲಿ ಎರಡು ದಿನಗಳಿಗೊಮ್ಮೆ ಸ್ಯಾನಿಟೈಸ್ ಮಾಡಿಸಬೇಕು. ಶಿಕ್ಷಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಶಾಲಾ ಆವರಣದಲ್ಲಿ ಮಕ್ಕಳು ಗುಂಪುಗೂಡುವುದನ್ನು ತಡೆಯಬೇಕು. ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಮಕ್ಕಳು ನೀರು, ಆಹಾರ ಹಂಚಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.