ಕಡಬ: ಭಾರತ ದೇಶ ವಿಶ್ವಮಾನ್ಯ ರಾಷ್ಟ್ರವಾಗಿ ಹೊರಹೊಮ್ಮಿ ಜಗತ್ತಿನಲ್ಲಿ ಮಾನ್ಯತೆ ಪಡೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯ ವೈಶಿಷ್ಟ್ಯತೆ ಇಡೀ ಪ್ರಪಂಚದಲ್ಲಿ ಜನಜನಿತವಾಗಿದೆ. ನಮ್ಮ ದೇಶದ ಮೌಲ್ಯಗಳು ಉಳಿಯಬೇಕಾದರೆ, ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಮಂಗಳವಾರ ಸಂಜೆ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಕೊಯಿಲ ಮಹಾಶಕ್ತಿಕೇಂದ್ರ ಹಾಗೂ ರಾಮಕುಂಜ, ಕೊಯಿಲ, ಹಳೆನೇರೆಂಕಿ ಶಕ್ತಿಕೇಂದ್ರದ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನನ್ನ ಗೆಲುವಿನ ಗೌರವ ಯಾವುದೇ ಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಿರುವ ತಳಮಟ್ಟದ ಕಾರ್ಯಕರ್ತರಿಗೆ ಸಲ್ಲಬೇಕು. ಈ ಗೆಲುವು ಮುಂದಿನ ತಾ.ಪಂ.,ಜಿ.ಪಂ.,ಲೋಕಸಭೆ ಚುನಾವಣೆಯಲ್ಲೂ ಸಿಗಬೇಕು. ಆದ್ದರಿಂದ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ನಿರ್ವಹಿಸೋಣ. ಯಾವುದೇ ಅನುದಾನವಿದ್ದರೂ ಬೂತ್ ಸಮಿತಿ ಅಧ್ಯಕ್ಷರ ಗಮನಕ್ಕೇ ತಂದು ಹಂಚುತ್ತೇನೆ ಎಂದರು.
ಅಭಿನಂದನಾ ಭಾಷಣ ಮಾಡಿದ ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಭಾರೀ ಅಂತರ ಗೆಲುವಿಗೆ ಮೂಲಕಾರಣಕರ್ತರು ಮತದಾರರು ಹಾಗೂ ದೇವದುರ್ಲಭ ಕಾರ್ಯಕರ್ತರು ಆಗಿದ್ದಾರೆ. ಭಾಗೀರಥಿಯವರು ವಿಧಾನಸಭೆಯಲ್ಲಿ ತಮ್ಮ ಮನೆದೇವರು ಹಾಗೂ ಮತದಾರರ ಹೆಸರಿನಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ದೊಡ್ಡ ಗೌರವ ನೀಡಿದ್ದಾರೆ ಎಂದರು.
ಎಸ್.ಅಂಗಾರ ಅವರು 30 ವರ್ಷ ಶಾಸಕರಾಗಿ, 3 ವರ್ಷ ಸಚಿವರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪಾರ್ಟಿಗೆ ಕಪ್ಪುಚುಕ್ಕೆ ಬಾರದಂತೆ, ಭ್ರಷ್ಟಾಚಾರವಿಲ್ಲದೆ ಕೆಲಸ ನಿರ್ವಹಿಸಿದ್ದಾರೆ. ಹಿರಿಯ ಕಾರ್ಯಕರ್ತರ ತ್ಯಾಗ, ಬಲಿದಾನ, ಪರಿಶ್ರಮದಿಂದ ಬಿಜೆಪಿ ಬೆಳೆದಿದೆ. ಸಾಮಾನ್ಯ ಕಾರ್ಯಕರ್ತನೂ ಶಾಸಕನಾಗಿ ಆಯ್ಕೆಯಾಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ ಮಾತನಾಡಿ, ನಾವು ಜಾತೀಯತೆಯನ್ನು ಬಿಟ್ಟು ಹಿಂದುತ್ವ ಪ್ರತಿಪಾದನೆಯೊಂದಿಗೆ ಪಕ್ಷ ಕಟ್ಟಬೇಕು. ಜಾತಿಯನ್ನು ನಮ್ಮೊಳಗಿನ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಿ ಸಮಾಜಕ್ಕೆ ಬಂದಾಗ ನಾವೆಲ್ಲರೂ ಹಿಂದೂಗಳು ಎಂಬ ಭಾವನೆಯಲ್ಲಿ ಕೆಲಸ ಮಾಡಬೇಕು. ಆ ಮೂಲಕ ದೇಶ ಕಟ್ಟುವ ಕಾರ್ಯ ಮಾಡಬೇಕು ಎಂದರು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಬಿಜೆಪಿ ಪ್ರಬುದ್ಧ ಪ್ರಕೋಷ್ಠದ ಸಂಚಾಲಕ ಧರ್ಮಪಾಲ ರಾವ್ ಮಾತನಾಡಿ, ನೆಮ್ಮದಿಯ ಬದುಕಿಗಾಗಿ ಬಿಜೆಪಿ ಗೆಲ್ಲಬೇಕು. ಆದ್ದರಿಂದ ಗ್ರಾ.ಪಂ.ನಿಂದ ಲೋಕಸಭೆ ತನಕದ ಚುನಾವಣೆಯಲ್ಲೂ ಬಿಜೆಪಿಯೇ ಗೆಲ್ಲಬೇಕು. ಕೇಂದ್ರದಲ್ಲಿ ಮೋದಿ ಸರಕಾರವೇ ಇದ್ದಲ್ಲಿ ಹಳ್ಳಿ ಹಳ್ಳಿಗೂ ಕಾಂಕ್ರಿಟ್ ರಸ್ತೆ ಆಗಲಿದೆ ಎಂದರು.
ಬಿಜೆಪಿ ಸುಳ್ಯ ಮಂಡಲದ ಉಪಾಧ್ಯಕ್ಷೆ ಜಯಂತಿ ಆರ್. ಗೌಡ, ಕೊಯಿಲ ಶಕ್ತಿಕೇಂದ್ರದ ಪ್ರಮುಖ್ ರಾಮಚಂದ್ರ ಏಣಿತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಯಿಲ ಗ್ರಾ.ಪಂ. ಮಾಜಿ ಅಧ್ಯಕ್ಷೆ ಹೇಮಾ ಮೋಹನ್‌ದಾಸ್ ಶೆಟ್ಟಿ ವಂದೇ ಮಾತರಂ ಹಾಡಿದರು. ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಆರಂಭಿಸಲಾಯಿತು. ಬಿಜೆಪಿ ದ.ಕ. ಜಿಲ್ಲಾ ಸಮಿತಿ ಸದಸ್ಯ ಲಕ್ಷ್ಮೀ ನಾರಾಯಣ ರಾವ್ ಆತೂರು ಸ್ವಾಗತಿಸಿದರು. ಹಳೆನೇರೆಂಕಿ ಶಕ್ತಿಕೇಂದ್ರದ ಪ್ರಮುಖ್ ಜನಾರ್ದನ ಕದ್ರ ವಂದಿಸಿದರು. ಸುಳ್ಯ ಮಂಡಲ ವೃತ್ತಿಪರ ಪ್ರಕೋಷ್ಠದ ಸಂಚಾಲಕ ಸದಾಶಿವ ಶೆಟ್ಟಿ ಮಾರಂಗ ಕಾರ್ಯಕ್ರಮ ನಿರೂಪಿಸಿದರು. ಅಭಿನಂದನಾ ಸಭೆ ಬಳಿಕ ಶ್ರೀ ರಾಮಕುಂಜೇಶ್ವರ ದೇವರ ಸನ್ನಿಧಿಯಲ್ಲಿ ರಂಗಪೂಜೆ ನಡೆಯಿತು.