ಬೆಂಗಳೂರು: ಕಾಂಗ್ರೆಸ್ ನೀಡಿದ ಭರವಸೆಯಂತೆ ಕರ್ನಾಟಕ ರಾಜ್ಯದ ಸಾರಿಗೆ ನಿಗಮಗಳ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಬಗ್ಗೆ ವರದಿ ಸಿದ್ಧವಾಗಿದೆ. ಬುಧವಾರ ಮಧ್ಯಾಹ್ನ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಕೆಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಗ್ಯಾರಂಟಿಗಳು ಖಂಡಿತ ಈಡೇರುತ್ತವೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವೆಂದು ಹೇಳಿದ್ದೇವೆ. ಅದನ್ನು ಈಡೇರಿಸುತ್ತೇವೆ’ ಎಂದರು.
ನಮ್ಮ ಪ್ರಣಾಳಿಕೆಯಲ್ಲಿ ನಾವು ಎಪಿಎಲ್- ಬಿಪಿಎಲ್ ಎಂದು ಹೇಳಿಲ್ಲ. ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಿಬಹುದು ಎಂದರು.
‘ಉಚಿತ ಪ್ರಯಾಣದ ಅನುಕೂಲ ಹಾಗೂ ಅನನುಕೂಲ ಬಗ್ಗೆ ಅಧಿಕಾರಿಗಳು ವಿಸ್ತೃತ ವರದಿ ಸಿದ್ಧಪಡಿಸಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ನಿಗಮಗಳಿಂದ ಮಾಹಿತಿ ಪಡೆಯಲಾಗಿದೆ. ಶಾಂತಿನಗರದ ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಸಭೆ ನಡೆದಿದೆ. ಪ್ರತಿ ವರ್ಷ ಅಂದಾಜು 3,200 ಕೋಟಿ ಹಣ ಬೇಕಾಗುತ್ತದೆ. ಸಾರಿಗೆ ಇಲಾಖೆಯ ನಾಲ್ಕು ನಿಗಮಗಳು ನಷ್ಟದಲ್ಲಿರುವ ಹಿನ್ನೆಲೆ ಸರ್ಕಾರ ಸಹಾಯಧನ ನೀಡಿದರೇ ಯೋಜನೆ ಜಾರಿಗೆ ಮಾಡಲು ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.