ಕೇಂದ್ರ ಸರಕಾರದಿಂದ 81.35 ಕೋಟಿ ಜನರಿಗೆ ಹೊಸವರ್ಷದ ಉಡುಗೊರೆ
ಹೊಸದಿಲ್ಲಿ : ಬಡವರಿಗೆ ಹೊಸ ವರ್ಷದ ಉಡುಗೊರೆಯಾಗಿ ಕೇಂದ್ರ ಸರ್ಕಾರ ಒಂದು ವರ್ಷ ಉಚಿತ ಪಡಿತರ ನೀಡಲಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಎನ್‌ಎಫ್‌ಎಸ್‌ಎ ಅಡಿಯಲ್ಲಿ 81.35 ಕೋಟಿ ಬಡವರಿಗೆ ಒಂದು ವರ್ಷದವರೆಗೆ ಉಚಿತ ಪಡಿತರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಡಿಯಲ್ಲಿ ಬರುವ ಬಡವರು ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳನ್ನು ಪಡೆಯುತ್ತಾರೆ. ಇತ್ತೀಚಿನ ಕ್ಯಾಬಿನೆಟ್‌ನ ಈ ನಿರ್ಧಾರವನ್ನು ದೇಶದ ಬಡವರಿಗೆ ಹೊಸ ವರ್ಷದ ಉಡುಗೊರೆ ಎಂದು ಕೇಂದ್ರ ಹೇಳಿಕೊಂಡಿದೆ. ಈ ಯೋಜನೆಗೆ ಕೇಂದ್ರ ವರ್ಷಕ್ಕೆ ಸುಮಾರು 2 ಲಕ್ಷ ಕೋಟಿ ರೂ. ಖರ್ಚು ಮಾಡಲಿದೆ.
ಉಚಿತ ಪಡಿತರ ವಿತರಣೆಯ ಶೇ.೧೦೦ ವೆಚ್ವನ್ನು ಕೇಂದ್ರ ಸರಕಾರವೇ ಭರಿಸಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಎನ್‌ಎಫ್‌ಎಸ್‌ಎ ಅಡಿಯಲ್ಲಿ ಬಡವರಿಗೆ ಕೆಜಿಗೆ 3 ರೂ.ಗೆ ಅಕ್ಕಿ ಮತ್ತು ಗೋಧಿಯನ್ನು ಕೆಜಿಗೆ 2 ರೂ.ಗೆ ನೀಡಲಾಗುತ್ತದೆ. ಕೇಂದ್ರ ಸಂಪುಟದ ನಿರ್ಧಾರದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಆಹಾರ ಸಚಿವ ಪಿಯೂಷ್ ಗೋಯಲ್, ಎನ್‌ಎಫ್‌ಎಸ್‌ಎ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಸಂಪೂರ್ಣ ಹೊರೆಯನ್ನು ಕೇಂದ್ರವು ಭರಿಸಲಿದೆ ಎಂದು ಹೇಳಿದರು.
ಫಲಾನುಭವಿಗಳು ಆಹಾರ ಧಾನ್ಯ ಪಡೆಯಲು ಒಂದು ರೂಪಾಯಿ ಪಾವತಿಸಬೇಕಾಗಿಲ್ಲ. ಈ ಯೋಜನೆಗಾಗಿ ಕೇಂದ್ರ ಈಗ ವರ್ಷಕ್ಕೆ ಸುಮಾರು 2 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ ಎಂದು ಗೋಯಲ್ ಹೇಳಿದ್ದಾರೆ.