ಪುತ್ತೂರು: ಕಡಬ ತಾಲೂಕಿನಲ್ಲಿ ನಿರಂತರ ಆನೆ ಹಾವಳಿಯಿಂದ ಜನರು ಜೀವಭಯದಿಂದ ಬದುಕುವಂತಾಗದ್ದು, ರಕ್ಷಣೆ ಒದಗಿಸಲು ಸರಕಾರು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಬಿ.ಎಂ.ಭಟ್ ಸರಕಾರವನ್ನು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವಅವರು, ಜನರ ಜೀವಕ್ಕೆ ಅಪಾಯವಾಗುತ್ತಿರುವುದು ನಮ್ಮಕಣ್ಣ ಮುಂದೇ ಇದ್ದರೂ ಅದರ ಬಗ್ಗೆ ಸರಕಾರ ಗಮನ ನೀಡದಿರುವುದು ಖಂಡನೀಯ. ಬಿಜೆಪಿ ಸರಕಾರ ಆನೆ ತಡೆಗೆ ಯಾವುದೇ ವ್ಯವಸ್ಥೆ ಮಾಡದೇ ಜನರ ಸಾವಿಗೆ ಕಾರಣವಾಗಿತ್ತು. ಇದೀಗ ಪುನಃ ಆನೆ ದಾಳಿ ನಡೆದಿದ್ದು ಆನೆ ತುಳಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ. ಜನರ ಜೀವ ರಕ್ಷಣೆ ಮಾಡುವುದು ಸರಕಾರದ ಮೂಲಭೂತ ಕರ್ತವ್ಯವಾಗಿದೆ. ಜನರ ಜೀವದ ರಕ್ಷಣೆ ಮಾಡಲಾಗದ ಸರಕಾರಗಳು ಕಸ್ತೂರಿರಂಗನ್ ವರದಿ ಜಾರಿ ಮಾಡಿದರೆ ಏನಾಗಬಹುದು. ಪರಿಸರ ರಕ್ಷಣೆ ಆಗಬೇಕಾಗಿರುವುದೇ ಜನರ ಬದುಕಿಗೆ ಎನ್ನುವ ಸರಕಾರ ಇಲ್ಲಿ ಕಾಡುಮೃಗಗಳ ಮೂಲಕ ಜನರ ಹತ್ಯೆ ನಡೆಸುತ್ತಿದೆ. ಜನರ ಜೀವವನ್ನೇ ತೆಗೆಯುತ್ತಿರುವ ಕಾಡು ಮೃಗಗಳಿಂದ ರಕ್ಷಣೆ ಮಾಡಲಾಗದ ಸರಕಾರಗಳು ಪರಿಸರ ರಕ್ಷಣೆ ಮಾಡುವುದಾದರೂ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಆದ್ದರಿಂದ ಇನ್ನು ಮುಂದೆ ನಮ್ಮ ಸರಕಾರಗಳು, ಜನಪ್ರತಿನಿಧಿಗಳು ಆನೆ ಮೊದಲಾದ ಯಾವುದೇ ಕಾಡುಮೃಗಗಳಿಂದ ಅಪಾಯ ಬಾರದಂತೆ ಬಡ ಜನರ ಬದುಕಿಗೆ ಆಸರೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.