ಪುತ್ತೂರು : ಪೋಷಕರು ತಮ್ಮ ಮಕ್ಕಳಿಗೆ ಧನಾತ್ಮಕ ಚಿಂತನೆಗಳ ಮೂಲಕ ಪ್ರತಿಕ್ರಿಯೆಯನ್ನು ನೀಡಿ ಪ್ರೋತ್ಸಾಹಿಸಬೇಕು. ಮಕ್ಕಳು ತಪ್ಪು ಮಾಡಿದಾಗ ಅದನ್ನು ನಕಾರಾತ್ಮಕವಾಗಿ ಪರಿಗಣಿಸದೆ ಆ ತಪ್ಪನ್ನು ತಿದ್ದಿ ಸನ್ನಿವೇಶವನ್ನು ನಿಭಾಯಿಸಿಸುವುದು ಪೋಷಕರ ದೊಡ್ಡ ಜವಾಬ್ದಾರಿಯಾಗಿದೆ ಎಂದು ಅಂಬಿಕಾ ಸಿ ಬಿ ಎಸ್ ಇ ಶಾಲಾ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಹೇಳಿದರು.
ಅವರು 2023 -24 ನೇ ಸಾಲಿನ ಪೂರ್ವ ಪ್ರಾಥಮಿಕ ವರ್ಷದ ಮೊದಲ ಪೋಷಕರ ಸಭೆಯಲ್ಲಿ ಮಾತನಾಡಿದರು.
ಪೂರ್ವ ಪ್ರಾಥಮಿಕ ಶಾಲಾ ಹಂತ ಅಂದರೆ ಮೂರು, ನಾಲ್ಕು ವರ್ಷದ ಎಳೆಯ ಮಕ್ಕಳು. ಇವರ ಸ್ವಭಾವ, ವರ್ತನೆ, ಕಲಿಕೆ ಹೇಗೆ ಎಂದರೆ ನೋಡಿ ಕಲಿಯುತ್ತಾರೆ. ಇದು ನೋಡಿ ಕಲಿಯುವ ಹಂತವಾಗಿದೆ, ಹಾಗಾಗಿ ಮಕ್ಕಳು ಎಲ್ಲವನ್ನು ನೋಡಿ ಕಲಿಯುತ್ತಾರೆ. ಹಾಗಾದ ಕಾರಣ ಪೋಷಕರು ಮಕ್ಕಳಿಗೆ ಆದರ್ಶ ಪ್ರಾಯವಾಗಿರಬೇಕು. ನಮ್ಮ ನಡೆ,ನುಡಿಗಳಲ್ಲಿ ನಾವು ಜಾಗೃತವಾಗಿರಬೇಕು ಎಂದು ಹೇಳಿದರು.
ಅಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಗು ಒಂದು ದೀಪದ ಹಾಗೆ. ಅದು ಸಮಾಜವನ್ನು ಬೆಳಗುವಂತಹ ದೀಪವಾಗಿ ಬೆಳೆಸಬೇಕು. ನಮ್ಮನ್ನು ಮುಂದೆ ನೋಡಿಕೊಳ್ಳಬೇಕು ಎಂಬ ಉದ್ದೇಶದೊಂದಿಗೆ ಮಕ್ಕಳನ್ನು ಬೆಳೆಸುವುದಲ್ಲ ನಮ್ಮ ದೇಶಕ್ಕೆ, ಸಮಾಜಕ್ಕೆ ಒಳ್ಳೆಯ ಪ್ರಜೆಯಾಗಬೇಕು ರಾಷ್ಟ್ರ ಸೇವೆಗೆ ಮಗುವನ್ನು ತಯಾರು ಮಾಡಬೇಕು ಎಂಬ ಉದ್ದೇಶಕ್ಕಾಗಿ ಮಕ್ಕಳನ್ನು ಬೆಳೆಸಬೇಕು ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಮಾಲತಿ.ಡಿ. ಭಟ್ ಸ್ವಾಗತಿಸಿ, ಶಿಕ್ಷಕಿ ಕುಮಾರಿ ಶ್ರುತಿ ಶೆಟ್ಟಿ ವಂದಿಸಿದರು. ಶೈಲಶ್ರೀ ಕಾರ್ಯಕ್ರಮ ನಿರೂಪಿಸಿದರು.