ನಿಡ್ಪಳ್ಳಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯು ಒಂದು. ಮನೆ ಮನೆಗೆ ಕುಡಿಯುವ ನೀರು ಪೂರೈಕೆಗಾಗಿ ಇರುವ ಈ ಯೋಜನೆಯಿಂದ ನಿಡ್ಪಳ್ಳಿ ಗ್ರಾಮದಲ್ಲಿ ಕೊಳವೆ ಬಾವಿ ಕೊರೆದು ಟ್ಯಾಂಕ್ ನಿರ್ಮಾಣ ನಡೆದಿದೆ.
ಇದೀಗ ಕಾಮಗಾರಿ ಮುಂದುವರಿದು ರಸ್ತೆ ಬದಿಯಲ್ಲಿ ಪೈಪು ಅಳವಡಿಕೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಹೆಚ್ಚಿನ ಕಡೆ ರಸ್ತೆ ಬದಿಯ ಚರಂಡಿ ಮೂಲಕವೇ ಗುಂಡಿ ತೆಗೆದು ಪೈಪು ಆಳವಡಿಸಲಾಗುತ್ತಿದೆ. ಆದರೆ ಪೈಪ್ ಅಳವಡಿಸಿದ ನಂತರ ಮೊದಲಿದ್ದ ಚರಂಡಿ ನಾಪತ್ತೆ.
ನಿಡ್ಪಳ್ಳಿ ಗ್ರಾಮದ ಕೊಪ್ಪಳ ಎಂಬಲ್ಲಿಯೂ ಪೈಪು ಲೈನ್ ಅಳವಡಿಸಲಾಗಿದ್ದು, ನೀರು ಹೋಗಲು ಇದ್ದ ಚರಂಡಿ ಮುಚ್ಚಿ ಹೋಗಿದೆ. ಮಾತ್ರವಲ್ಲ, ಮೋರಿಯೂ ಬಂದ್ ಆಗಿದೆ. ಇದರಿಂದ ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿದು ಇಡೀ ರಸ್ತೆ ಕೆಟ್ಟು ಹೋಗುವ ಭೀತಿ ಎದುರಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.