ಪುತ್ತೂರು: ಅಂಕಪಟ್ಟಿ ನೈಜತೆ ಪರಿಶೀಲನೆಯ ದುಬಾರಿ ಶುಲ್ಕ ಉದ್ಯೋಗ ಆಕಾಂಕ್ಷಿತರಿಗೆ ಹೊರೆಯಾಗಿ ಪರಿಣಮಿಸಿದ್ದು, ಶುಲ್ಕವನ್ನು ಕಡಿತ ಮಾಡುವಂತೆ ಶಾಸಕ ಅಶೋಕ್ ಕುಮಾರ್ ರೈ ಒತ್ತಾಯ ಮಾಡಿದ್ದರ ಫಲವೆಂಬಂತೆ ಮಂಗಳೂರು ವಿಶ್ವವಿದ್ಯಾಲಯ ಶುಲ್ಕದಲ್ಲಿ ವಿನಾಯಿತಿ ನೀಡಿದೆ.
ಗುರುವಾರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಇದುವರೆಗೆ ಒಂದು ಅಂಕಪಟ್ಟಿಗೆ 1500 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಅಂದರೆ ಎಲ್ಲಾ ಅಂಕಪಟ್ಟಿಗೆ ಒಟ್ಟು 13500 ರೂ. ಶುಲ್ಕ ಪಾವತಿಸಬೇಕಾಗಿತ್ತು. ಗ್ರಾಮೀಣ ಭಾಗದ ಬಡ ಉದ್ಯೋಗ ಆಕಾಂಕ್ಷಿತರು ಈ ಶುಲ್ಕವನ್ನು ಪಾವತಿಸಲು ಕಷ್ಟ ಪಡುತ್ತಿದ್ದರು. ಅಶೋಕ್ ಕುಮಾರ್ ರೈ ಅವರು ಈ ಬಗ್ಗೆ ಕುಲಸಚಿವರ ಜೊತೆ ಮಾತುಕತೆ ನಡೆಸಿ, ಶುಲ್ಕ ಇಳಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ಅವರಿಗೆ ಅಭಿನಂದನೆ ಎಂದು ಜಿ.ಪಿ.ಎಸ್.ಟಿ.ಆರ್. (ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ) ಅಭ್ಯರ್ಥಿ ಗಣೇಶ್ ತಿಳಿಸಿದ್ದಾರೆ.
ಉದ್ಯೋಗಕ್ಕಾಗಿ ಹಾತೊರೆಯುವ ಅಭ್ಯರ್ಥಿಗಳು ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಪರದಾಡುವ ಪರಿಸ್ಥಿತಿ ಇತ್ತು. ಆದ್ದರಿಂದ ಇದರ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು, ಶುಲ್ಕ ಕಡಿಮೆ ಮಾಡುವಂತೆ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಅವರಿಗೆ ಜಿ.ಪಿ.ಎಸ್.ಟಿ.ಆರ್. ಅಭ್ಯರ್ಥಿಗಳು ಫೋನ್ ಮಾಡಿ ವಿನಂತಿಸಿದ್ದರು.
ಕೂಡಲೇ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಮಂಗಳೂರು ವಿಶ್ವವಿದ್ಯಾಲಯದ ಕುಲ ಸಚಿವರ ಜೊತೆ ಮಾತನಾಡಿದ್ದರು. ಇದರ ಪರಿಣಾಮ ಎಂಬಂತೆ ನಿನ್ನೆ ನಡೆದ ಸಿಂಡಿಕೇಟ್ ಸಭೆ ಅಂಕಪಟ್ಟಿ ನೈಜತೆ ಪರಿಶೀಲನೆಯ ಶುಲ್ಕವನ್ನು ಕಡಿಮೆ ಮಾಡಲು ಅನುಮೋದನೆ ನೀಡಲಾಗಿದೆ. ಹೀಗಾಗಿ 1500 ರೂ. ಇದ್ದ ಶುಲ್ಕವನ್ನು 500 ರೂ.ಗೆ ಇಳಿಸಲಾಗಿದೆ. ಇದಕ್ಕೆ ಕಾರಣರಾದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.