ಇಂಫಾಲ: ಘರ್ಷಣೆ ಪೀಡಿತ ಮಣಿಪುರದ ಬಿಷ್ಣುಪುರ್ ಹಾಗೂ ಚುರಾಚಂದ್‌ಪುರ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಶಂಕಿತ ಉಗ್ರರು ಹಾಗೂ ಜನರ ಗುಂಪಿನ ನಡುವೆ ನಡೆದ ಹೊಸ ಹಿಂಸಾಚಾರದಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಹಾಗೂ ಇನ್ನೊಬ್ಬನು ಗಾಯಗೊಂಡಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಏತನ್ಮಧ್ಯೆ, ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಸರಕಾರವು ಮತ್ತೊಂದು ಸಮುದಾಯಕ್ಕೆ ಸೇರಿದ ಉಗ್ರಗಾಮಿಗಳಿಂದ ಸ್ಥಳೀಯರನ್ನು ರಕ್ಷಿಸಲು ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಮಣಿಪುರದ ಪಿಡಬ್ಲ್ಯೂಡಿ ಸಚಿವ ಕೊಂತೌಜಮ್ ಗೋವಿಂದಸ್ ಅವರ ಬಿಷ್ಣುಪುರ ಜಿಲ್ಲೆಯಲ್ಲಿರುವ ಮನೆಯನ್ನು ಬುಧವಾರ ಧ್ವಂಸಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಹುತೇಕ ಮಹಿಳೆಯರನ್ನು ಒಳಗೊಂಡ ಗುಂಪು ನಿಂಗ್‌ತೌಖೋಂಗ್ ಪ್ರದೇಶದ ಮನೆಯ ಮೇಲೆ ದಾಳಿ ಮಾಡಿ ಗೇಟ್, ಕಿಟಕಿಗಳು, ಕೆಲವು ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಹಾನಿಗೊಳಿಸಿದಾಗ ಬಿಜೆಪಿ ನಾಯಕರಾಗಿರುವ ಸಚಿವರು ಹಾಗೂ ಅವರ ಕುಟುಂಬ ಸದಸ್ಯರು ಮನೆಯಲ್ಲಿ ಇರಲಿಲ್ಲ.
ಬುಧವಾರ ನಡೆದ ಹಿಂಸಾಚಾರದ ವೇಳೆ ತೋಯಿಜಮ್ ಚಂದ್ರಮೋನಿ (30 ವರ್ಷ)ಎಂಬಾತನನ್ನು ಗುಂಡು ಹಾರಿಸಿ ಕೊಲ್ಲಲಾಗಿದ್ದು, ಚುರಾಚಂದ್‌ಪುರದಲ್ಲಿ ಇತ್ತೀಚೆಗೆ ನಡೆದ ಜನಾಂಗೀಯ ಘರ್ಷಣೆಯಲ್ಲಿ ಸ್ಥಳಾಂತರಗೊಂಡು ಆಶ್ರಯ ಪಡೆದಿದ್ದ ಜನರ ಗುಂಪಿನ ಮೇಲೆ ಶಂಕಿತ ಉಗ್ರರು ಗುಂಡು ಹಾರಿಸಿದಾಗ 22 ವರ್ಷದ ಲೀಚೊಂಬಮ್ ಅಬುಂಗ್ನಾವೊ ಗಾಯಗೊಂಡಿದ್ದಾನೆ ಎಂದು ಬಿಷ್ಣುಪುರದ ಮೊಯಿರಾಂಗ್‌ನಲ್ಲಿನ ಪರಿಹಾರ ಶಿಬಿರದಲ್ಲಿ ಅಧಿಕಾರಿ ಹೇಳಿದರು. ಮಂಗಳವಾರ ತಡರಾತ್ರಿ ಉಗ್ರರು ಬಿಷ್ಣುಪುರ ಜಿಲ್ಲೆಯ ಟೊರೊಂಗ್ಲಾಬಿಯಲ್ಲಿ ಕೆಲವು ಗ್ರಾಮಸ್ಥರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬ ವರದಿಗಳಿವೆ ಎಂದು ಅವರು ಹೇಳಿದರು.