ಬೆಂಗಳೂರು: ಶಾಸಕ ಯು.ಟಿ. ಖಾದರ್ ಅವರು ಕಾಂಗ್ರೆಸಿನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದು ಬಹುತೇಕ ಪಕ್ಕಾ ಆಗಿದೆ ಎಂದು ಹೇಳಲಾಗಿದೆ.
ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಸ್ವತಃ ಯು.ಟಿ. ಖಾದರ್ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸ್ಪೀಕರ್ ಆಗಿ ಆಯ್ಕೆಯಾಗಿರುವ ಬೆನ್ನಿಗೇ ಯು.ಟಿ. ಖಾದರ್ ಅವರು ಈ ಹೇಳಿಕೆ ನೀಡಿದ್ದಾರೆ. ಸ್ಪೀಕರ್ ತಟಸ್ಥರಾಗಿರಬೇಕು ಎಂಬ ಕಾರಣಕ್ಕೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಕರಾವಳಿ ಭಾಗದಿಂದ ಅತೀ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯು.ಟಿ. ಖಾದರ್ ಅವರು, ಕಾಂಗ್ರೆಸಿನ ನಿಷ್ಠಾವಂತ ನಾಯಕ. ಆದರೆ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿರುವ ಬೆನ್ನಿಗೇ, ಸ್ಪೀಕರ್ ಹುದ್ದೆಯ ಸ್ಥಾನಮಾನಕ್ಕೆ ಕುಂದು ಉಂಟಾಗಬಾರದೆಂಬ ಕಾರಣದಿಂದ ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.