ಹೊಸದಿಲ್ಲಿ : ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ಬ್ಯಾಂಕ್‌ಗಳಲ್ಲಿ ಮಂಗಳವಾರದಿಂದ ಶುರುವಾಗಲಿದೆ. ಅದಕ್ಕಾಗಿ ಯಾವುದೇ ಫಾರಂಗಳನ್ನು ಭರ್ತಿ ಮಾಡುವುದು ಅಥವಾ ಗುರುತಿನ ಚೀಟಿ ನೀಡುವ ಅಗತ್ಯವಿಲ್ಲವೆಂದು ಎಸ್‌ಬಿಐ ಸ್ಪಷ್ಟಪಡಿಸಿದೆ.
2 ಸಾವಿರ ರೂ. ನೋಟು ವಿನಿಮಯ ಮಾಡಲು ಕೋರಿಕೆ ರಸೀತಿ (ರಿಕ್ವಿಸಿಷನ್ ಸ್ಲಿಪ್), ಗುರುತಿನ ಚೀಟಿ ನೀಡಬೇಕು, ಫಾರಂ ಭರ್ತಿ ಮಾಡಿಕೊಡಬೇಕು ಎಂದು ಹಲವು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ನೋಟು ವಿನಿಮಯ ಕೌಂಟರ್‌ಗಳಲ್ಲಿ ಒಂದು ಬಾರಿಗೆ ಒಬ್ಬರಿಂದ 20 ಸಾವಿರ ರೂ.ವರೆಗೆ ಕೋರಿಕೆ ರಸೀತಿ ಇಲ್ಲದೆ ಸ್ವೀಕರಿಸಬೇಕು ಎಂದು ಸ್ಥಳೀಯ ಪ್ರಧಾನ ಕಚೇರಿಗಳಿಗೆ ಕಳುಹಿಸಲಾಗಿರುವ ಸೂಚನೆಯಲ್ಲಿ ಎಸ್‌ಬಿಐ ಮುಖ್ಯ ಜನರಲ್ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ.
ವಿನಿಮಯ ಸಂದರ್ಭದಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ಗುರುತಿನ ಚೀಟಿ ಸಲ್ಲಿಸಬೇಕಾಗಿಲ್ಲ. ಸ್ವಂತ ಖಾತೆಗೆ 2 ಸಾವಿರ ರೂ. ನೋಟುಗಳನ್ನು ಠೇವಣಿ ಇರಿಸಲು ಆರ್‌ಬಿಐ ಮಿತಿ ಹೇರಿಲ್ಲ. ಆದರೆ, ಅಗತ್ಯಕ್ಕೆ ತಕ್ಕಂತೆ ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ಪ್ರಕ್ರಿಯೆಗಳನ್ನು ಕೇಳಿದಲ್ಲಿ ನೀಡಬೇಕಾಗುತ್ತದೆ ಎಂದಿದ್ದಾರೆ.
ಅಧಿಕೃತವಾಗಿ ಮಂಗಳವಾರದಿಂದ ನೋಟು ವಿನಿಮಯ ಪ್ರಕ್ರಿಯೆ ಆರಂಭವಾಗುವುದಿದ್ದರೂ, ಶನಿವಾರವೇ ಕೆಲವೆಡೆ ಬ್ಯಾಂಕ್‌ಗಳ ಶಾಖೆಗಳಿಗೆ ಗ್ರಾಹಕರು ವಿನಿಮಯಕ್ಕಾಗಿ ಆಗಮಿಸಿದ್ದರು. ಕೆಲವು ಮಂದಿ ಕ್ಯಾಶ್ ಡೆಪಾಸಿಟ್ ಮಷಿನ್‌ಗಳನ್ನು ಬಳಕೆ ಮಾಡಿಕೊಂಡದ್ದೂ ಬೆಳಕಿಗೆ ಬಂದಿದೆ. ಇತರ ಪ್ರಕರಣಗಳಲ್ಲಿ ಸಾರ್ವಜನಿಕರು ಚಿನ್ನಾಭರಣಗಳನ್ನು 2 ಸಾವಿರ ರೂ. ನೋಟುಗಳ ಮೂಲಕ ಖರೀದಿ ಮಾಡಲು ಪ್ರಯತ್ನ ಮಾಡಿದ್ದರು. ಕೆಲವು ಚಿನ್ನಾಭರಣ ಮಳಿಗೆಗಳಲ್ಲಿ 2 ಸಾವಿರ ರೂ. ನೋಟುಗಳನ್ನು ಸ್ವೀಕರಿಸಲು ಒಪ್ಪಿಕೊಳ್ಳಲಿಲ್ಲ ಎಂದು ಹೇಳಲಾಗಿದೆ.
ಒಂದು ಬಾರಿ ವ್ಯಕ್ತಿ 20 ಸಾವಿರ ರೂ.ಗಳನ್ನು ವಿನಿಮಯ ಮಾಡಿಕೊಂಡ ಬಳಿಕ ಅದೇ ವ್ಯಕ್ತಿ ಮತ್ತೂಂದು ಬಾರಿ ಸರತಿಯಲ್ಲಿ ನಿಂತು ನೋಟುಗಳ ವಿನಿಮಯ ಮಾಡಿಕೊಳ್ಳಲು ಅವಕಾಶ ಇದೆ ಎಂದು ಮೂಲಗಳು ತಿಳಿಸಿವೆ.