ಪುತ್ತೂರು: ಯುವಕರ ಮೇಲೆ ಪೊಲೀಸರಿಂದ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿ ಬಿಜೆಪಿ ಹಂಗಾಮಿ ಸರಕಾರ ತಾವೇ ಒತ್ತಡ ತಂದು ಕಾಂಗ್ರೆಸ್ ಮೇಲೆ ಆರೋಪ ಹೊರಿಸಿರುವುದು ಬಿಜೆಪಿಗೆ ಕನಿಷ್ಠ ಜ್ಞಾನ ಇರಬೇಕಿತ್ತಲ್ಲವೇ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನಾಯಕರ ಬ್ಯಾನರ್ ಅಳವಡಿಸಿ, ಚಪ್ಪಲಿ ಹಾರ ಹಾಕಿರುವುದುದರಿಂದ ಕಾಂಗ್ರೆಸ್ ನಷ್ಟವಾದರೂ ಏನು, ಲಾಭವಾದರು ಏನು ಎಂದು ಪ್ರಶ್ನಿಸಿದ ಅವರು, ಘಟನೆಗೆ ಡಿ.ವಿ.ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲ್ ನೇರ ಕಾರಣ ಎಂದು ಆರೋಪಿಸಿದರು.
ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಗೆ ಆರೋಪಿಗಳು ಯಾರೆಂದು ಗೊತ್ತಿದ್ದರೂ ಅವರ ಮೇಲೆ ನೇರ ಆರೋಪ ಯಾಕೆ ಮಾಡುತ್ತಿಲ್ಲ. ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪ್ರಕರಣದಲ್ಲಿ ಕಾಂಗ್ರೆಸ್ ನ್ನು ಎಳೆದು ತರುವ ಕೆಲಸ ಯಾಕೆ ಮಾಡುತ್ತಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸರಕಾರ ಬರುತ್ತಿದ್ದರೆ ಅರುಣ್ ಪುತ್ತಿಲರನ್ನು ಈಗಾಗಲೇ ಚಪಾತಿ ಮಾಡುತ್ತಿದ್ದರು ಎಂದು ಅವರು ಹೇಳಿದರು.
ಈಗಾಗಲೇ ಯುವಕರಿಗೆ ಈ ರೀತಿಯ ದೌರ್ಜನ್ಯ ನಡೆಸಲು ಅವರೇನು ದೇಶ ದ್ರೋಹದ ಕೆಲಸ ಮಾಡಿದ್ದಾರೆಯೇ. ಬಿಜೆಪಿ ನಾಯಕರು ನಗರ ಠಾಣೆಗೆ ದೂರು ನೀಡಿರುವುದು. ಆದರೆ ಯುವಕರನ್ನು ಡಿವೈಎಸ್ಪಿ ಕಚೇರಿ ಕೊಂಡು ಹೋಗಿ ಗ್ರಾಮಾಂತರ ಠಾಣೆಯ ಪೊಲೀಸರನ್ನು ಕರೆಸಿ ದೌರ್ಜನ್ಯ ನಡೆಸಿರುವುದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದ ಅವರು, ರಾಜಕಾರಣಿಗಳ ತಾಳಕ್ಕೆ ಕುಣಿದು ವ್ಯಾಪ್ತಿ ಮೀರಿ ಕೆಲಸ ಮಾಡಿದವರಿಗೆ ಈ ಘಟನೆ ಪಾಠ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖೇಶ್ ಕೆಮ್ಮಿಂಜೆ, ರೋಶನ್ ರೈ ಬನ್ನೂರು, ಮಂಜುನಾಥ ಕೆಮ್ಮಾಯಿ, ವಿಕ್ಟರ್ ಪಾಯಸ್ ಉಪಸ್ಥಿತರಿದ್ದರು.