ಪುತ್ತೂರು: ದೌರ್ಜನ್ಯಕ್ಕೆ ಒಳಗಾದ ಯುವಕರ ಫೊಟೋ ನೋಡಿ ಎದೆ ಝಲ್ಲೆನಿಸಿತು. ಪೊಲೀಸರ ಕೃತ್ಯ ಅಮಾನುಷ. ಇಂತಹ ಪರಿಸ್ಥಿತಿ ಬೇರಾರಿಗೂ ಬರಬಾರದು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪೊಲೀಸ್ ರಿಂದ ದೌರ್ಜನ್ಯಕ್ಕೊಳಗಾದ ಬಿಜೆಪಿ ಕಾರ್ಯಕರ್ತರನ್ನು ಚಕ್ರವರ್ತಿ ಸೂಲಿಬೆಲೆಯವರು ಪುತ್ತೂರು ಆಸ್ಪತ್ರೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿ, ಮಾತನಾಡಿದರು.
ತೇಜೋವಧೆ, ಅವಮಾನ ಮಾಡುವುದನ್ನು ನಾವು ಸಹಿಸಿಕೊಳ್ಳಬೇಕಾದ ಸಂದರ್ಭಗಳು ಜೀವನದಲ್ಲಿ ಬರುತ್ತವೆ. ಅದರಲ್ಲೂ ಪಕ್ಷಕ್ಕೆ ಸೋಲಾದಾಗ ಇಂತಹ ಘಟನೆಗಳು ಸಹಜ. ಹಾಗೆಂದು ನೋವುಂಟಾದವರು ಎಲ್ಲರೂ ನರೇಂದ್ರ ಮೋದಿಯನ್ನು ನೋಡಬೇಕು. ಅವರಷ್ಟು ಜೀವನದಲ್ಲಿ ಅವಮಾನ ಅನುಭವಿಸಿದವರು ಬೇರಾರು ಸಿಗಲಿಕ್ಕಿಲ್ಲಎಂದು ವಿಶ್ಲೇಷಿಸಿದರು.
ದೌರ್ಜನ್ಯಕ್ಕೆ ಒಳಗಾದ ಕಾರ್ಯಕರ್ತರ ಪರಿಸ್ಥಿತಿ ಬೇರಾರಿಗೂ ಬರಬಾರದು. ತಂದೆ – ತಾಯಿ ಹಿಂದೂ ಸಮಾಜದ ಕೆಲಸಕ್ಕೆಂದು ಕಳುಹಿಸಿಕೊಡುತ್ತಾರೆ. ಆದರೆ ಹಿಂದೂ ಸಮಾಜದ ಸೇವೆ ಎಂದು ಬಂದು ನಿಂತಾಗ ಇಂತಹ ಘಟನೆ ಆ ಸಮಾಜದಿಂದಲೇ ನಡೆದಿದೆ ಎಂದರೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ. ಆದ್ದರಿಂದ ಆ ಯುವಕರ ಜೊತೆ ನಾನು ಇದ್ದೇನೆ. ದೌರ್ಜನ್ಯಕ್ಕೆ ಒಳಗಾದ ಯುವಕರ ಎದೆಯಲ್ಲಿ ಇನ್ನೂ ಹಿಂದುತ್ವದ ಜ್ವಾಲೆ ಪ್ರಜ್ವಲಿಸುತ್ತಿದೆ ಎಂದರು. ಅರುಣ್ ಕುಮಾರ್ ಪುತ್ತಿಲ, ದಿನೇಶ್ ಪಂಜಿಗ ಮೊದಲಾದವರು ಉಪಸ್ಥಿತರಿದ್ದರು.