ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಿಗಿ ಪಟ್ಟುಗಳಿಂದಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಮುಖ್ಯಮಂತ್ರಿ ಆಯ್ಕೆಯನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ನಿನ್ನೆ ದಿಲ್ಲಿಗೆ ತೆರಳಿರುವ ಡಿಕೆಶಿ ಕೊಡುವುದಾದರೆ ಮುಖ್ಯಮಂತ್ರಿ ಹುದ್ದೆ ಕೊಡಿ, ಇಲ್ಲವಾದರೆ ಯಾವ ಹುದ್ದೆಯೂ ಬೇಡ, ಸಾಮಾನ್ಯ ಶಾಸಕನಾಗಿ ಇರುತ್ತೇನೆ ಎಂದು ಖಡಕ್ ಆಗಿ ಹೇಳಿದ ನಂತರ ಖರ್ಗೆ ಸೇರಿ ಹೈಕಮಾಂಡ್ ನಾಯಕರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಶಾಸಕರ ಒಲವು ಸಿದ್ದರಾಮಯ್ಯ ಕಡೆಗಿದೆ. ಆದರೆ ಪಕ್ಷವನ್ನು ಗೆಲ್ಲಿಸುವಲ್ಲಿ ಡಿಕೆಶಿ ಕೂಡ ಅಪಾರ ಶ್ರಮ ಹಾಕಿದ್ದಾರೆ. ಈ ಪೈಕಿ ಯಾರು ಮುನಿಸಿಕೊಂಡರೂ ಭವಿಷ್ಯದಲ್ಲಿ ಪಕ್ಷಕ್ಕೆ ಹಾನಿಯಾಗಬಹುದು ಎಂಬ ಕಾರಣಕ್ಕೆ ಹೈಕಮಾಂಡ್ ಸಂಧಾನ ಸೂತ್ರವೊಂದನ್ನು ತಯಾರುಗೊಳಿಸುತ್ತಿದೆ. ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ತಮ್ಮ ಪ್ಲಸ್ ಪಾಯಿಂಟ್‌ಗಳನ್ನು ಹೇಳಿಕೊಂಡು ಕೊಡುವುದಾದರೆ ಐದು ವರ್ಷದ ಪೂರ್ಣಾವಧಿ ಕೇಳದ್ದಾರೆ. ಹೀಗಾಗಿ ಮುಖ್ಯಮಂತ್ರಿ ಪಟ್ಟದ ಮಾತುಕತೆ ಆಯ್ಕೆ ಒಂದಿಂಚು ಕದಲದೆ ನಿಂತಲ್ಲೆ ನಿಂತಿದೆ.
ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿರುವ ವೀಕ್ಷಕರು ಆ ಕುರಿತು ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಒಪ್ಪಿಸಿದ್ದರು. ಅದಾದ ನಂತರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ದಿಲ್ಲಿಗೆ ಕರೆಸಿಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಇಬ್ಬರ ಜತೆಗೂ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆದಾಗ್ಯೂ, ಮಂಗಳವಾರ ರಾತ್ರಿಯೂ ಅಂತಿಮ ಒಪ್ಪಂದಕ್ಕೆ ಬರುವಲ್ಲಿ ವಿಫಲವಾಗಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಅಂತಿಮ ಸಭೆ ನಿಗದಿಪಡಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.ಈ ಮಧ್ಯೆ, ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನಿವಾಸದಲ್ಲಿ ಸಮಾಲೋಚನೆ ನಡೆಸಿದ್ದಾರೆ. ಮತ್ತೊಂದೆಡೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಮಾತುಕತೆ ನಡೆಸಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟುಹಿಡಿದಿದ್ದಾರೆ.
ಖರ್ಗೆ ಭೇಟಿ ವೇಳೆ ಸಿಎಂ ಸ್ಥಾನಕ್ಕಾಗಿ ಆಗ್ರಹಿಸಿದ ಶಿವಕುಮಾರ್, ಮುಖ್ಯಮಂತ್ರಿ ಸ್ಥಾನ ನೀಡಿದರೆ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದಂತೆ ಉತ್ತಮವಾಗಿ ಕೆಲಸ ಮಾಡುವೆ ಎಂದಿದ್ದಾರೆ. ಸಿಎಂ ಸ್ಥಾನ ನೀಡದಿದ್ದರೆ ಕೇವಲ ಶಾಸಕನಾಗಿ ಮುಂದುವರಿಯುತ್ತೇನೆ. ಸರ್ಕಾರದ ಭಾಗವಾಗುವುದಿಲ್ಲ ಎಂದೂ ಹೇಳಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಖರ್ಗೆ, ಎಲ್ಲ ವಾಸ್ತವಾಂಶ ಗೊತ್ತಿದೆ. ನಾನು ಇತರರ ಜತೆ ಮಾತನಾಡಿ ಮುಂದಿನ ವಿಚಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದಾಗಿನಿಂದ ಈವರೆಗೆ ನಡೆದಿರುವ ಸಂಪೂರ್ಣ ರಾಜಕೀಯ ಚಿತ್ರಣವನ್ನು ಖರ್ಗೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಸಮ್ಮಿಶ್ರ ಸರ್ಕಾರ ಪತನವನ್ನೇ ಟ್ರಂಪ್ ಕಾರ್ಡ್ ಮಾಡಿರುವ ಡಿ.ಕೆ. ಶಿವಕುಮಾರ್, 2021ರಲ್ಲಿ ಸರ್ಕಾರ ಬೀಳಲು ಕಾರಣ ಯಾರೆಂದು ನಿಮಗೆ ತಿಳಿದಿದೆ. ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವಿಗೆ ನಾನೇ ಕಾರಣ. ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಪಕ್ಷ ಕಟ್ಟಿದ್ದೇನೆ ಎಂದು ವಿವರಿಸಿದ್ದಾರೆ.
ದಲಿತರೆಲ್ಲರೂ ಸಿದ್ದರಾಮಯ್ಯ ಹಿಂದೆ ಇದ್ದಾರೆ ಎಂಬುದು ನಿಮಗೆ ತಿಳಿದಿಲ್ವಾ? ಈ ಬಾರಿ ಒಕ್ಕಲಿಗ ಹಾಗೂ ಲಿಂಗಾಯತ ಮತಗಳು ನಮ್ಮ ಕೈ ಹಿಡಿದಿವೆ. ಇದನ್ನು ಪರಿಗಣಿಸಿ ಈ ಬಾರಿ ನನಗೆ ಅವಕಾಶ ನೀಡಲೇಬೇಕು. ಸಿದ್ದರಾಮಯ್ಯ ಜೆಡಿಎಸ್‌ನಿಂದ ಬಂದು ಒಂದು ಅವಧಿಗೆ ಮುಖ್ಯಮಂತ್ರಿ, ಇನ್ನೊಂದು ಅವಧಿಗೆ ವಿಪಕ್ಷ ನಾಯಕನಾಗಿ 10 ವರ್ಷ ಅಧಿಕಾರ ಅನುಭವಿಸಿದ್ದಾರೆ. ಇನ್ನು ಎಷ್ಟು ಅಂತ ಅವರಿಗೆ ಅಧಿಕಾರ ಕೊಡಬೇಕು ಎಂಬುದಾಗಿ ಮೂಲ ವರ್ಸಸ್ ವಲಸಿಗ ದಾಳವನ್ನೂ ಶಿವಕುಮಾರ್ ಈ ವೇಳೆ ಉರುಳಿಸಿದ್ದಾರೆ ಎಂದು ತಿಳಿದುಬಂದಿದೆ.