ಮುಂದಿನ ಜನಾಂಗ ಮೂಕಾಂಬಿಕೆ ದರ್ಶನ ಪಡೆಯಬೇಕಾದರೆ ದಿ ಕೇರಳ ಸ್ಟೋರಿ ನೋಡಿ ಎಂಬ ಒಕ್ಕಣೆ
ಕೊಲ್ಲೂರು : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆವರಣದಲ್ಲಿ ದಿ ಕೇರಳ ಸ್ಟೋರಿ ಸಿನೆಮಾ ನೋಡಿ ಎಂದು ಹೇಳುವ ಬ್ಯಾನರ್ ಇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯಲ್ಲಿ ಬರೆದಿರುವ ಬ್ಯಾನರ್ಗಳನ್ನು ಇರಿಸಲಾಗಿದ್ದು, ಕೊಲ್ಲೂರಿಗೆ ಬರುವ ಪ್ರವಾಸಿಗರ ಗಮನ ಸೆಳೆಯಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಬ್ಯಾನರ್ಗಳು ವೈರಲ್ ಆಗಿದೆ. ಕೊಲ್ಲೂರಿಗೆ ಬರುವ ಕೇರಳದ ಭಕ್ತರ ಗಮನ ಸೆಳೆಯಲೆಂದೇ ಇಲ್ಲಿ ಈ ಬ್ಯಾನರ್ ಹಾಕಿದ್ದಾರೆ.
ದಿ ಕೇರಳ ಸ್ಟೋರಿ ಕೇರಳದಲ್ಲಿ ಹಿಂದು ಮತ್ತು ಕ್ರಿಶ್ಚಿಯನ್ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಬಲೆಗೆ ಬೀಳಿಸಿ ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳಿಸುವ ಕಥೆ ಒಳಗೊಂಡಿದೆ. ಯಶಸ್ವಿಯಾಗಿ ಓಡುತ್ತಿರುವ ಈ ಚಿತ್ರವನ್ನು ಹಿಂದು ಸಂಘಟನೆಗಳು ಬೆಂಬಲಿಸಿದರೆ, ಉಳಿದವರು ಕೆಂಡ ಕಾರುತ್ತಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರತಿದಿನ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ಕೇರಳದಿಂದ ಅನೇಕರು ಬಂದು ದೇವಿಯ ದರ್ಶನ ಪಡೆಯುತ್ತಾರೆ. ಮಲಯಾಳಿಗಳನ್ನೇ ಉದ್ದೇಶಿಸಿ ಈ ಬ್ಯಾನರ್ಗಳನ್ನು ಬರೆಸಲಾಗಿದೆ. ‘ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ಕೇರಳ ಸ್ಟೋರಿ ನೋಡಿ’ ಎಂದು ಇದರಲ್ಲಿ ಬರೆಯಲಾಗಿದೆ.
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮೂಕಾಂಬಿಕಾ ದೇವಾಲಯದ ದ್ವಾರ ಹಾಗೂ ಆವರಣದಲ್ಲಿ ಬ್ಯಾನರ್ ಅಳವಡಿಸಿದ್ದಾರೆ. ವಿನೋದ್ ಕೊಲ್ಲೂರು, ವಿಜಯ ಬಳಗಾರ್, ಸಂತೋಷ್ ಭಟ್, ಪ್ರಕಾಶ್ ಹಳ್ಳಿ ಬೇರು, ಹರೀಶ್ ಶೆಟ್ಟಿ ನೇತೃತ್ವದಲ್ಲಿ ಈ ಬ್ಯಾನರ್ ಅಳವಡಿಕೆ ಮಾಡಲಾಗಿದೆ.