ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಗೊನೆ ಮುಹೂರ್ತ | ಬಲ್ಲೇರಿ ಮಲೆ ಯಾತ್ರೆ ಕೈಗೊಂಡ ಆರ್ಯಾಪು ಗ್ರಾಮಸ್ಥರು

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಡಿ. 22ರಂದು ಬೆಳಿಗ್ಗೆ ಗೊನೆ ಮುಹೂರ್ತ ನಡೆಯಿತು. ಬಳಿಕ ದೇವಾಲಯದ ಮೂಲಸ್ಥಳವಾದ ಬಲ್ಲೇರಿ ಮಲೆಗೆ ತೆರಳಿ ಪೂಜೆ ನೆರವೇರಿಸಿ, ಮೃತ್ತಿಗೆ ತರಲಾಯಿತು.

ಪ್ರತಿವರ್ಷ ಜಾತ್ರೆಗೆ ಪೂರ್ವಭಾವಿಯಾಗಿ ನಡೆಯುವ ಗೊನೆ ಮುಹೂರ್ತದಂದು, ಬಲ್ಲೇರಿ ಮಲೆಗೆ ತೆರಳುವ ಸಂಪ್ರದಾಯ ಬಹಳ ಹಿಂದಿನಿಂದಲೂ ಈ ದೇವಸ್ಥಾನದಲ್ಲಿ ನಡೆದು ಬಂದಿದೆ. ವರ್ಷಕ್ಕೆ ಒಂದೇ ಬಾರಿ ಮಾತ್ರ ಬಲ್ಲೇರಿ ಮಲೆಯ ತುದಿ ಭಾಗಕ್ಕೆ ತೆರಳುವುದು ವಾಡಿಕೆ. ಆದ್ದರಿಂದ ಹೋಗುವ ದಾರಿಯುದ್ಧಕ್ಕೂ ಬೆಳೆದು ನಿಂತಿರುವ ಗಿಡ – ಬಳ್ಳಿಗಳನ್ನು ಸವರಿಕೊಂಡು, ದಾರಿ ಮಾಡಿಕೊಂಡೇ ಸಾಗಬೇಕು. ಕಾಡಿನ ತುತ್ತತುದಿಯಲ್ಲಿ ದೇವಸ್ಥಾನದ ಮೂಲನೆಲೆಯನ್ನು ತಲುಪಿ, ಅಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಪ್ರಾರ್ಥಿಸಿ ಬಳಿಕ ಮೂಲಮೃತ್ತಿಕೆಯನ್ನು ತರಲಾಗುತ್ತದೆ.

ಬಲ್ಲೇರಿ ಮಲೆ ಬಹಳ ಧಾರ್ಮಿಕ ಮಹತ್ವ ಹೊಂದಿರುವ ಕಾಡು. ಕಾರ್ಪಾಡಿ ದೇವಸ್ಥಾನದ ಹಿಂಬದಿಯಲ್ಲಿ ಎರಡು ಭಾಗಕ್ಕೆ ವಿಶಾಲವಾಗಿ ಹಬ್ಬಿರುವ ಅರಣ್ಯದ ತುದಿ ಭಾಗದಲ್ಲಿ ದೇವಾನುದೇವತೆಗಳ ನೆಲೆ ಎಂಬ ನಂಬಿಕೆಯೂ ಇದೆ. ಬಹಳ ಹಿಂದೆ, ಕಾರ್ಪಾಡಿ ದೇವಸ್ಥಾನ ಈ ಬಲ್ಲೇರಿ ಮಲೆಯ ತುದಿಯಲ್ಲಿತ್ತು ಎಂದು ಹೇಳಲಾಗುತ್ತದೆ. ಪ್ರತಿದಿನ ದೇವಸ್ಥಾನಕ್ಕೆ ಪೂಜೆ ನೆರವೇರಿಸಲು ಅರ್ಚಕರು, ಅರಣ್ಯದ ತುದಿಗೆ ಹೋಗಬೇಕಿತ್ತು. ಆಗ ಹುಲಿಗಳು ವಾಸವಾಗಿದ್ದ ಕಾಡದು. ಇದರಿಂದ ಭಯಗೊಂಡ ಅರ್ಚಕರು, ಶ್ರೀ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸುತ್ತಾ – ಮಲೆಯ ತುದಿಗೆ ಬರಲು ಕಷ್ಟ ಎಂದು ತನ್ನ ನೋವನ್ನು ತೋಡಿಕೊಂಡರು. ಹಾಗಾಗಿ ಶ್ರೀ ಸುಬ್ರಹ್ಮಣ್ಯ ದೇವರು ಬಲದ ಕಾಲನ್ನು ಮುಂದಿಟ್ಟು, ಒಂದು ಹೆಜ್ಜೆ ಊರಿದ ಪ್ರದೇಶವೇ ಕಾರ್ಪಾಡಿ. ಅಂದರೆ ಈಗ ದೇವಸ್ಥಾನ ಇರುವ ಪ್ರದೇಶ. ಈ ಕಾರಣದಿಂದ ಪ್ರತಿವರ್ಷ ಜಾತ್ರೆಗೆ ಪೂರ್ವಭಾವಿಯಾಗಿ ಒಂದು ಬಾರಿ, ಮಲೆಯ ತುದಿಗೆ ತೆರಳಿ ಮೂಲಮೃತ್ತಿಕೆ ತಂದು, ದೇವಸ್ಥಾನದಲ್ಲಿ ಜಾತ್ರೋತ್ಸವ ನೆರವೇರುತ್ತವೆ.



































 
 

ಡಿ. 27- 29ರಿಂದ ಕಿರುಷಷ್ಠಿ ಜಾತ್ರೆ:

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 27ರಿಂದ 29ರವರೆಗೆ ಕಿರುಷಷ್ಠಿ ಉತ್ಸವ ನಡೆಯಲಿದೆ. 27ರಂದು ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಉಗ್ರಾಣ ಪೂಜೆ, ಸಂಜೆ ಗಣೇಶ ಪ್ರಾರ್ಥನೆ, ದೀಪಾರಾಧನೆ, ದೊಡ್ಡ ರಂಗಪೂಜೆ ನೆರವೇರಲಿದೆ. ಡಿ. 28ರಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ಸುಬ್ರಹ್ಮಣ್ಯ ದೇವರಿಗೆ ಪವಮಾನಾಭಿಷೇಕ, ನಾಗದೇವರಿಗೆ ಆಶ್ಲೇಷ ಹೋಮ, ಆಶ್ಲೇಷ ಬಲಿ, ಮಧ್ಯಾಹ್ನ ತುಲಾಭಾರ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 6.30ಕ್ಕೆ ದುರ್ಗಾಪೂಜೆ ನಡೆದು, ಶ್ರೀ ದೇವರ ಬಲಿ ಹೊರಟು ಪೆರಿಯ ಬಲಿ ಉತ್ಸವ, ಕಟ್ಟೆಪೂಜೆ ನಡೆಯಲಿದೆ. ಬಳಿಕ ಕೇರಳ ಸಂಪ್ರದಾಯದ ನೃತ್ಯಬಲಿ ಸೇವೆ, ಮೇಲ್ಮಜಲಿನಲ್ಲಿ ಸಾರ್ವಜನಿಕ ಕಟ್ಟೆಪೂಜೆ, ಸಂಪ್ಯ ಶ್ರೀ ಗಣೇಶ ಸುಬ್ರಹ್ಮಣ್ಯ ಕಟ್ಟೆಗೆ ಶ್ರೀ ದೇವರ ಸವಾರಿ ನಡೆಯಲಿದೆ.

ಡಿ. 29ರಂದು ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಳಿ, ಬಟ್ಟಲು ಕಾಣಿಕೆ ನಡೆಯಲಿದೆ. ಬಳಿಕ ಗಂಧ ಪ್ರಸಾದ, ನವಕ ಕಲಶ, ಮಹಾಪೂಜೆ, ಮಂತ್ರಾಕ್ಷತೆ, ಮಧ್ಯಾಹ್ನ 1ರಿಂದ ಶ್ರೀ ವ್ಯಾಘ್ರ ಚಾಮುಂಡಿ ನೇಮೋತ್ಸವ, ಗುಳಿಗೆ ದೈವಕ್ಕೆ ತಂಬಿಲ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top