ಪುತ್ತೂರು: ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಭಾವನೆ ಕಾರ್ಯಕರ್ತರದ್ದು. ಅವರ ಭಾವನೆ ಯಾವ ರೀತಿ ಇದೆ ಎನ್ನುವುದನ್ನು ಅವರ ಜೊತೆ ಚರ್ಚಿಸಿಯೇ ಮುಂದೆ ಹೋಗಲಾಗುವುದು ಎಂದು ಪಕ್ಷೇತರವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಚುನಾವಣೆಯ ಬಗ್ಗೆ ಹಾಗೂ ನಂತರದ ಬೆಳವಣಿಗೆಯಲ್ಲಿ ಎಂಪಿ ಫಾರ್ ಪುತ್ತಿಲ ಅಭಿಯಾನದ ಬಗೆಗಿನ ಪ್ರಶ್ನೆಗೆ ಉತ್ತರಿಸಿದರು.
ಹಿಂದೂ ಸಮಾಜಕ್ಕೆ ಅನ್ಯಾಯವಾದಾಗ ಜೊತೆಗೆ ನಿಂತಿದ್ದೇವೆ, ಹೋರಾಟ ಮಾಡಿದ್ದೇವೆ. ಹಿಂದುತ್ವವನ್ನು ಪ್ರತಿಪಾದನೆ ಮಾಡಬೇಕು. ಸ್ವಜನಪಕ್ಷಪಾತ, ಸರ್ವಾಧಿಕಾರಿ ಧೋರಣೆಯ ನಾಯಕರ ವಿಚಾರಧಾರೆಯ ವಿರುದ್ಧ ಹೋರಾಟ ನಡೆಸಿದ್ದೆ. ಈ ಹೋರಾಟಕ್ಕೆ ಹಿನ್ನಡೆ ಆಗಿರಬಹುದು. ಆದರೆ ಇದು ಸೈದ್ಧಾಂತಿಕ ಗೆಲುವು. 62 ಸಾವಿರಕ್ಕಿಂತಲೂ ಹೆಚ್ಚಿನ ಮತದಾರರು ನನ್ನ ಜೊತೆಗೆ ನಿಂತುಕೊಂಡಿದ್ದಾರೆ. ಅವರಿಗೆ ನಾನು ಚಿರಋಣಿ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಜೊತೆಗಿದ್ದು, ಹಿಂದುತ್ವದ ಪ್ರತಿಪಾದನೆ ಮಾಡಿಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಎಂದರು.
ಎಸ್.ಡಿ.ಪಿ.ಐ. – ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಹೆಚ್ಚಿನ ಮತಗಳು ಕಾಂಗ್ರೆಸಿಗೆ ಬಿದ್ದಿವೆ. ಎಸ್.ಡಿ.ಪಿ.ಐ. ಪ್ರಚಾರ ಕಾರ್ಯವನ್ನು ಮಾಡಿಲ್ಲ. ಆದ್ದರಿಂದ ನಿರೀಕ್ಷಿತ ಪ್ರಮಾಣದ ಮತ ಅವರಿಗೆ ಸಿಕ್ಕಿಲ್ಲ ಎಂದು ವಿಶ್ಲೇಷಿಸಿದರು.
ನೂತನ ಶಾಸಕರು ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ತಿಳಿಸಿದ್ದಾರೆ. ಅದರಂತೆ ಕ್ಷೇತ್ರದ ಎಲ್ಲಾ ಜನರ ವಿಶ್ವಾಸ ಪಡೆದು ಆಡಳಿತ ನೀಡಲಿ ಎಂದು ಹಾರೈಸಿದರು.