ಪುತ್ತೂರು: ಬಿಜೆಪಿ ಭದ್ರಕೋಟೆಯನ್ನು ಮತ್ತೊಮ್ಮೆ ಕಾಂಗ್ರೆಸ್ ಭೇದಿಸಿದೆ. ಒಗ್ಗಟ್ಟಿನ ಮಂತ್ರಕ್ಕೆ ಕಾಂಗ್ರೆಸ್ ಗೆಲುವು ದಾಖಲಿಸಿದ್ದು, ಮತ್ತೊಮ್ಮೆ ಗದ್ದುಗೆಗೆ ಏರಲು ಸಿದ್ಧತೆ ನಡೆಸಿದೆ. ಭಾರೀ ಪೈಪೋಟಿ ನಡುವೆಯೂ ಅಶೋಕ್ ಕುಮಾರ್ ರೈ ಗೆಲುವು ದಾಖಲಿಸಿದ್ದಾರೆ.
ಬಿಜೆಪಿಯ ಭದ್ರಕೋಟೆಯಾದರೂ, ಕಾಂಗ್ರೆಸ್ ಅಭ್ಯರ್ಥಿಗೆ ಭಾರೀ ಪೈಪೋಟಿ ನೀಡಿದ್ದು ಪಕ್ಷೇತರ ಅಭ್ಯರ್ಥಿ ಎನ್ನುವುದು ಈ ಬಾರಿಯ ವಿಶೇಷ. ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಡುವಿನ ಪೈಪೋಟಿಯಿಂದಾಗಿ ಮತ ವಿಭಜನೆಯಾಗಿದ್ದು, ಕಾಂಗ್ರೆಸ್ ಇದರ ಲಾಭವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಚುನಾವಣಾ ಪೂರ್ವದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಆಖಾಡದಲ್ಲಿ ನೇರಾ – ನೇರ ಸ್ಪರ್ಧೆ ಎದುರಾಗಿತ್ತು ಎನ್ನುವುದನ್ನು ಫಲಿತಾಂಶ ಖಚಿತ ಪಡಿಸಿದೆ.
ಪುತ್ತಿಲ ಪರ ಮತದಾರರ ಒಲವು:
ಅರುಣ್ ಕುಮಾರ್ ಪುತ್ತಿಲ ಪ್ರಾರಂಭದಿಂದಲೇ ತನ್ನ ಕ್ಲಾಸ್ ಮೇಟ್ ಅಶೋಕ್ ಕುಮಾರ್ ರೈ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಒಂದು ಹಂತದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡು, ಬಿಜೆಪಿಗರು ಹುಬ್ಬೇರಿಸಿ ನೋಡುವಂತೆ ಮಾಡಿದರು. ಆದರೆ ಕೊನೆ ಹಂತದಲ್ಲಿ ಮತ್ತೆ ಅಶೋಕ್ ರೈ ಮುನ್ನಡೆ ಕಾಯ್ದುಕೊಂಡು, ಗೆಲುವಿನತ್ತ ದಾಪುಗಾಲಿಟ್ಟರು. ಗೆಲುವಿನ ಹತ್ತಿರ ಬಂದು ಸಣ್ಣ ಅಂತರದಿಂದ ಪುತ್ತಿಲ ಸೋಲುಂಡರು. ಅಷ್ಟರಲ್ಲಿ, ಛೇ, ಗೆಲ್ಲುತ್ತಾರೆ ಎಂದಿದ್ದರೆ ಪುತ್ತಿಲರಿಗೆ ಮತ ಹಾಕುತ್ತಿದ್ದೇವು ಎಂದು ಅನೇಕರು ಕೈ- ಕೈ ಹಿಸುಕಿಕೊಂಡ ನಿದರ್ಶನಗಳು ಇವೆ.
ಯಾರ್ಯಾರಿಗೆ ಎಷ್ಟೇಷ್ಟು ಮತ:
ಪುತ್ತೂರು ವಿಧಾನಸಭಾ ಕ್ಷೇತ್ರದ 212753 ಒಟ್ಟು ಮತದಾರರ ಪೈಕಿ ಶೇ. 80.27ರಷ್ಟು ಅಂದರೆ 170366 ಮತದಾನವಾಗಿತ್ತು. ಇದರಲ್ಲಿ ಅಂಚೆ ಮತ ಎಣಿಕೆ ಬಳಿಕ ಅಶೋಕ್ ಕುಮಾರ್ ರೈ ಅವರು 66607, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ 62458, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ 37558, ಜೆಡಿಎಸ್ ಪಕ್ಷದ ದಿವ್ಯಪ್ರಭಾ ಚಿಲ್ತಡ್ಕ 684, ಎಸ್.ಡಿ.ಪಿ.ಐ.ನ ಶಾಫಿ ಬೆಳ್ಳಾರೆ 2788, ಆಮ್ ಆದ್ಮಿ ಪಕ್ಷದ ಡಾ. ವಿಶು ಕುಮಾರ್ 650, ಕರ್ನಾಟಕ ರಾಷ್ಟ್ರ ಸಮಿತಿಯ ಐವನ್ ಫೆರಾವೋ 529, ಪಕ್ಷೇತರ ಅಭ್ಯರ್ಥಿ ಸುಂದರ ಕೊಯಿಲ 622 ಮತ ಪಡೆದುಕೊಂಡಿದ್ದಾರೆ. ನೋಟಾ ಪರವಾಗಿ 866 ಮತ ಚಲಾವಣೆಗೊಂಡಿದೆ.