ಪುತ್ತೂರು: ರಾಜ್ಯದ 36 ಮತ ಎಣಿಕೆ ಕೇಂದ್ರಗಳಲ್ಲಿ ಒಂದಾದ ಮಂಗಳೂರಿನ ಸುರತ್ಕಲ್ ಎನ್.ಐ.ಟಿ.ಕೆ. ಆವರಣ ಮತ ಎಣಿಕೆಗೆ ತಯಾರಾಗುತ್ತಿದೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಮತ ಎಣಿಕೆ ಆರಂಭವಾಗಲಿದ್ದು, ಎನ್.ಐ.ಟಿ.ಕೆ. ಆವರಣದಲ್ಲಿ ಪಕ್ಷದ ಪ್ರಮುಖರು ಜಮಾಯಿಸುತ್ತಿದ್ದಾರೆ.
ಎನ್.ಐ.ಟಿ.ಕೆ.ಯ ಮತ ಎಣಿಕೆ ನಡೆಯುವ ಕೇಂದ್ರದ ಒಳಗಡೆ ಯಾರಿಗೂ ಪ್ರವೇಶವಿಲ್ಲ, ಅಭ್ಯರ್ಥಿಗಳು ಅಥವಾ ಅವರ ಏಜೆಂಟರು ರಿಟರ್ನಿಂಗ್ ಅಧಿಕಾರಿಗಳ ಪಕ್ಕದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಮತ ಎಣಿಕೆ ಕೇಂದ್ರದ ಅಧಿಕಾರಿಗಳು ಫಲಿತಾಂಶ ಹೊರಬಿಡದೇ, ಯಾರಿಗೂ ಮಾಹಿತಿ ತಿಳಿಯುವಂತಿಲ್ಲ. ಆದ್ದರಿಂದ ಫಲಿತಾಂಶ ಘೋಷಣೆವರೆಗೆ ಕಾಯಬೇಕಷ್ಟೇ.
ಕುತೂಹಲ ಕೆರಳಿಸಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಮಾತ್ರವಲ್ಲ, ಮತದಾರರೂ ಫಲಿತಾಂಶಕ್ಕಾಗಿ ತುದಿಕಾಲಕ್ಕೆ ನಿಂತಿದ್ದಾರೆ. ಇದಕ್ಕಾಗಿ ರಾಜಕೀಯ ಪಕ್ಷಗಳ ಪ್ರಮುಖರು ನಿನ್ನೆ ರಾತ್ರಿಯೇ ಮಂಗಳೂರಿಗೆ ತೆರಳಿದ್ದಾರೆ.
ಮತ ಎಣಿಕೆ ಕೇಂದ್ರದಲ್ಲಿ 300 ಹೆಡ್ ಕಾನ್ಸ್ಟೇಬಲ್, 14 ಇನ್ಸ್ ಪೆಕ್ಟರ್, 2 ಡಿಸಿಪಿಗಳು, 400 ಸಿವಿಲ್ ಪೊಲೀಸ್ ಸಿಬ್ಬಂದಿ, 39 ಸಹಾಯಕ ಸಬ್ ಇನ್ಸ್ಟೆಕ್ಟರ್ಗಳ, 200 ಗೃಹರಕ್ಷಕರು, 4 ತುಕಡಿಗಳು, ಕೆ.ಎಸ್.ಆರ್.ಪಿ. ತುಕಡಿಗಳು ಮತ್ತು ಸಿಎಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ. ಇಂದು ಬೆಳಿಗ್ಗೆ 5 ಗಂಟೆಯಿಂದಲೇ ಸೆಕ್ಷನ್ 144 ಜಾರಿಯಲ್ಲಿದೆ.