ಪುತ್ತೂರು: ಪ್ರಚಾರ ಎಷ್ಟೇ ನಡೆದಿರಲಿ, ಅಬ್ಬರ ಎಷ್ಟೇ ಜೋರಾಗಿರಲಿ ಒಂದಂತೂ ಸತ್ಯ. ಚುನಾವಣೆ ಘೋಷಣೆಯಾದ ದಿನದಿಂದ ಇಂದಿನವರೆಗೆ ಆಖಾಡದಲ್ಲಿ ಒಂದೇ ತೆರನಾದ ಟ್ರೆಂಡ್ ಚಾಲ್ತಿಯಲ್ಲಿತ್ತು. ಗೆಲುವು ಮೊದಲೇ ನಿರ್ಧರಿತವಾದಂತೆ.
ಸಣ್ಣಪುಟ್ಟ ಏರುಪೇರುಗಳು ಇನ್ನೊಬ್ಬರಿಗೆ ಲಾಭವಾದೀತೇ ಹೊರತು, ಟ್ರೆಂಡ್ ಮಾತ್ರ ಇಂದಿನವರೆಗೆ ಯಥಾಸ್ಥಿತಿಯಲ್ಲಿತ್ತು. ಹಾಗಾಗಿ ಪುತ್ತೂರಿನ ಮುತ್ತು ಯಾರಾಗಲಿದ್ದಾರೆ ಎನ್ನುವುದು ಮುಗಿಯದ ಚರ್ಚೆಯಾಗಿದೆ. ಈ ಎಲ್ಲಾ ಚರ್ಚೆಗಳಿಗೆ, ಗೊಂದಲಗಳಿಗೆ ಮೇ 13 ಅಂದರೆ ನಾಳೆ ಮಧ್ಯಾಹ್ನದೊಳಗೆ ಉತ್ತರ ಸಿಗಲಿದೆ. ಸುರತ್ಕಲ್ ಎನ್.ಐ.ಟಿ.ಕೆ. ಆವರಣದೊಳಗೆ ನಡೆಯುವ ಮತ ಎಣಿಕೆ ಕಾರ್ಯಕ್ಕೆ ಬೆಳಿಗ್ಗೆ 8 ಗಂಟೆಗೆ ಚಾಲನೆ ಸಿಗಲಿದೆ. ಅಲ್ಲಿವರೆಗೆ ಮತದಾರನ ನಿರ್ಧಾರ ಲೆಕ್ಕಕ್ಕೇ ಸಿಗದು.
ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ನಡುವಿನ ತ್ರಿಕೋನ ಸ್ಪರ್ಧೆ ಭಾರೀ ಜೋರು ಸದ್ದು ಮಾಡಿತ್ತು. ರಾಜ್ಯದ ಮಾಧ್ಯಮಗಳು ತಿರುಗಿ ನೋಡುವಷ್ಟು…
ಬಿಜೆಪಿಯ ಭದ್ರಕೋಟೆ ಪುತ್ತೂರು. ಆದ್ದರಿಂದ ಆಶಾ ತಿಮ್ಮಪ್ಪ ಗೆಲುವು ಪಕ್ಕಾ – ಇದು ಬಿಜೆಪಿಯ ಬಲವಾದ ನಂಬಿಕೆ. ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಡುವಿನ ಮತ ವಿಭಜನೆ ಹಾಗೂ ಕಾಂಗ್ರೆಸಿನ ಒಗ್ಗಟ್ಟಿನ ಹೋರಾಟದಿಂದ ಅಶೋಕ್ ಕುಮಾರ್ ರೈ ಅವರಿಗೇ ಜಯಭೇರಿ ಎನ್ನುವುದು ಕಾಂಗ್ರೆಸಿಗರ ಲೆಕ್ಕಾಚಾರ. ಬಿಜೆಪಿಯನ್ನು ಗೆಲ್ಲಿಸುತ್ತಿದುದು ಹಿಂದುತ್ವವಾದ. ಆ ಎಲ್ಲಾ ಮತಗಳು ಹಿಂದು ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಅವರ ಪರವಾಗಿಯೇ ಇದೆ ಎನ್ನುವುದು ಪುತ್ತಿಲ ಅಭಿಮಾನಿಗಳ ಬಲವಾದ ವಾದ. ಇದಕ್ಕೆ ಪೂರಕವಾಗಿ ಬೆಟ್ಟಿಂಗ್ ಕೂಡ ಜೋರಾಗಿಯೇ ಸದ್ದು ಮಾಡುತ್ತಿದೆ.
ಫೀಲ್ಡ್ ನಲ್ಲೂ ಸರಿಯಾದ ಲೆಕ್ಕಾಚಾರ ಯಾರಿಗೂ ಸಿಕ್ಕಂತೆ ಕಾಣುತ್ತಿಲ್ಲ. ಯಾರಲ್ಲಿ ಮಾತನಾಡಿದರೂ ಮಾತು ಕೊನೆಯಾಗುವುದು ರಾಜಕೀಯದ ಚರ್ಚೆಯಿಂದಲೇ ಆದರೆ ಹೀಗೆಯೇ ಎಂದು ಖಂಡತುಂಡವಾಗಿ ಹೇಳಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಅವರವರು ಬೆಂಬಲಿಸುವ ನಾಯಕ ಅಥವಾ ಪಕ್ಷದ ಪರ ಮಾತನಾಡುತ್ತಾರೆ. ಇದಕ್ಕೆಲ್ಲಾ ತೆರೆ ಎಳೆಯಬೇಕಾದರೆ ಶನಿವಾರ ಮಧ್ಯಾಹ್ನದವರೆಗೆ ಕಾಯಲೇಬೇಕು. ಒಬ್ಬರು ಶಾಸಕರಾಗಿ ಆಯ್ಕೆ ಆಗಲೇ ಬೇಕಲ್ಲವೇ?