ಪುತ್ತೂರು: ಪ್ರಜಾಪ್ರಭುತ್ವದ ಮೌಲ್ಯವನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ನಿನ್ನೆಯ ಮತದಾನದಿಂದ ತಿಳಿದುಬರುತ್ತದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದ್ದು, ಬಿಜೆಪಿ ಜಯ ಗಳಿಸುವುದು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತದಾನದ ಹಿನ್ನೆಲೆಯಲ್ಲಿ ನ್ಯೂಸ್ ಪುತ್ತೂರು ಜೊತೆ ಮಾತನಾಡಿದ ಅವರು, ಬಿಜೆಪಿ ಗೆಲುವು ನಿಶ್ಚಿತ. ಅದರಲ್ಲಿ ಎರಡು ಮಾತಿಲ್ಲ. ಗೆಲುವಿನ ಅಂತರ ಸುಮಾರು 10ರಿಂದ 12 ಸಾವಿರದಷ್ಟು ಇರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಮತದಾನದಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿರುವುದು ಪುತ್ತೂರು ವಿಧಾನಸಭಾ ಕ್ಷೇತ್ರಾದ್ಯಂತ ಕಂಡುಬಂತು. ಅದರಲ್ಲೂ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಮಹಿಳಾ ಅಭ್ಯರ್ಥಿ ಎಂಬ ಕಾರಣಕ್ಕೆ, ಮಹಿಳೆಯರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಮತದಾನದ ದಿನ ಸುಮಾರು 50ರಷ್ಟು ಮತಗಟ್ಟೆಗಳಿಗೆ ಭೇಟಿ ನೀಡಿದ್ದೇನೆ. ಮಧ್ಯಾಹ್ನ 12 ಗಂಟೆಯ ಮೊದಲೇ ಹೆಚ್ಚಿನ ಮತದಾರರು ಮತ ಚಲಾಯಿಸಿದ್ದಾರೆ. ಸಂಜೆಯ ವೇಳೆ ಮಳೆ ಬಂದ ಕಾರಣ, ಒಂದಷ್ಟು ಮತದಾನ ಕಡಿಮೆ ಆಗಿರಬಹುದು. ಆದರೆ ಪ್ರಜಾಪ್ರಭುತ್ವದ ಮೌಲ್ಯವನ್ನು ಜನರು ಚೆನ್ನಾಗಿ ಅರ್ಥವಿಸಿಕೊಂಡಿದ್ದಾರೆ ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ. ಕಾರ್ಯಕರ್ತರು ಉತ್ಸಾಹದಿಂದಲೇ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಇದು ನನಗೆ ಇನ್ನಷ್ಟು ಹುರುಪು ನೀಡಿದೆ. ಮತದಾರರು, ಕಾರ್ಯಕರ್ತರು ಸೇರಿದಂತೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು ಆಶಾ ತಿಮ್ಮಪ್ಪ ತಿಳಿಸಿದ್ದಾರೆ.