ಮೈಸೂರು: ವಿಶ್ವವಿಖ್ಯಾತ ಮೈಸೂರಿನ ಅಂಬಾರಿಯನ್ನು ಹೊರುತ್ತಿದ್ದ ಆನೆ ಬಲರಾಮನ ಅಂತ್ಯಕ್ರಿಯೆ ಸೋಮವಾರ ವಿಧಿವಿಧಾನ ಪೂರ್ವಕವಾಗಿ ನಡೆಯಿತು. ಬಲರಾಮನ ಕಿವಿಯಲ್ಲಿ ನಾರಾಯಣ… ನಾರಾಯಣ… ನಾರಾಯಣ… ಎಂದು ಮಾವುತ ಮೂರು ಬಾರಿ ಉಸುರುತ್ತಾ, ಕಣ್ಣೀರಿಡುತ್ತಾ ಅಂತಿಮ ವಿದಾಯ ಹೇಳುತ್ತಿದ್ದರೆ, ಆಗಮಿಸಿದ ಎಲ್ಲರ ಕಣ್ಣಂಚಿನಲ್ಲೂ ನೀರಾಡಿತು.
ಸೌಮ್ಯ ಸ್ವಭಾವದ ಬಲರಾಮ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಮೈಸೂರಿನ ಗಜಪಡೆಯ ಸಾರಥಿ, ಅರಮನೆಯ ಮುಖ್ಯ ಆನೆ, ಬಲಾಢ್ಯ ಅಂಬಾರಿಯನ್ನೇ ಸಲೀಸಾಗಿ ಎತ್ತಬಲ್ಲ ಬಲರಾಮ, ಹೆಸರಿಗೆ ತಕ್ಕಂತೆ ಬಲರಾಮ. ಹಾಗೆಂದು ಎಲ್ಲಿಯೂ ತನ್ನ ಬಲ ಪ್ರದರ್ಶನ ಮಾಡಿಲ್ಲ. ಯಾರೊಂದಿಗೂ ಅನುಚಿತವಾಗಿ ವರ್ತಿಸಿಲ್ಲ. ತನ್ನ ಬಲದ ಬಗ್ಗೆ ಅಹಂಕಾರವೂ ಇಲ್ಲದ ನಿಗರ್ವಿ ಈತ. ಆದ್ದರಿಂದ ಬಲರಾಮನ ಸಾವು ಮೈಸೂರು ಮಾತ್ರವಲ್ಲ ರಾಜ್ಯದ ಜನರ ಶೋಕಕ್ಕೆ ಕಾರಣವಾಯಿತು.
ಪುಂಡಾನೆಗಳಿಗೆ ಸಿಂಹಸ್ವಪ್ನವಾಗಿದ್ದ ಬಲರಾಮನಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. 1987ರಲ್ಲಿ ಸೋಮವಾರಪೇಟೆ ತಾಲೂಕಿನ ಕಟ್ಟೇಪುರ ತಾಲೂಕಿನ ಅರಣ್ಯಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು. ಬಳಿಕ ಆನೆ ಶಿಬಿರದಲ್ಲಿ ಪಳಗಿದ್ದು, ಎಲ್ಲರ ಮೆಚ್ಚುಗೆ ಪಡೆದಿತ್ತು.
ಕೆಲ ದಿನಗಳಿಂದ ಬಲರಾಮನ ಬಾಯಲ್ಲಿ ಹುಣ್ಣಾಗಿದ್ದು, ಆಹಾರ, ನೀರು ಸೇವನೆಯೂ ಕಷ್ಟವಾಗಿತ್ತು. ಭೀಮನಕಟ್ಟೆ ಆನೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಕೊನೆಯುಸಿರೆಳೆದಿದ್ದಾನೆ ಬಲರಾಮ.
ಅರಣ್ಯ ಇಲಾಖೆ ಸಿಬ್ಬಂದಿಗಳು ಸಕಲ ಸರಕಾರಿ ಗೌರವಗಳೊಂದಿಗೆ ಭೀಮನಕಟ್ಟೆ ಆನೆ ಶಿಬಿರದಲ್ಲಿ ಅಂತ್ಯಕ್ರಿಯೆ ನಡೆಸಿದರು. ಮೈಸೂರು ಅರಮನೆಯ ರಾಜಪುರೋಹಿತರು, ರಾಜವಂಶಸ್ಥೆ ಶ್ರುತಿಕೀರ್ತಿ ದೇವಿ ಉಪಸ್ಥಿತರಿದ್ದರು.