ಪುತ್ತೂರು: ನಕ್ಸಲೈಟ್, ಭಯೋತ್ಪಾದನೆ, ಕಮ್ಯುನಿಸ್ಟ್ ಮೆಂಟಾಲಿಟಿ ಇರುವ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಆರ್ ಎಸ್ ಎಸ್ ಹಿನ್ನಲೆ ಹೊಂದಿರುವ ಹಿಂದೂ ಸಂಘಟನೆ ಭಜರಂಗದಳವನ್ನು ನಿಷೇಧ ಹೇಳಿಕೆ ಜತೆಗೆ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂಗಳನ್ನು ದಮನ ಮಾಡಿ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಪ್ರಯತ್ನವನ್ನು ಡಿಕೆಶಿ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿರುವ ಹಿಂದೂಗಳನ್ನು ಮಟ್ಟ ಹಾಕುವುದು ಕಾಂಗ್ರೆಸ್ ನ ಉದ್ದೇಶವಾಗಿದೆ ಎಂದು ತಿಳಿಸಿದ ಅವರು, ಈಗಾಗಲೇ ಈ ಹೇಳಿಕೆಯಿಂದ ಆಕ್ರೋಶಗೊಂಡಿರುವ ರಾಜ್ಯಾದ್ಯಂತ ಹಿಂದೂ ಸಂಘಟನೆಗಳು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಪಣ ತೊಟ್ಟಿದ್ದಾರೆ ಎಂದರು.
ಪುತ್ತೂರು ಒಂದಲ್ಲ ಒಂದು ಕಾರಣಕ್ಕೆ ರಾಜ್ಯದ ಗಮನ ಸೆಳೆದಿದ್ದು ಪ್ರತೀ ಚುನಾವಣೆಯನ್ನೂ ಸವಾಲಾಗಿ ಸ್ವೀಕರಿಸಿ ಗೆಲುವು ಸಾಧಿಸುತ್ತಿದೆ. ಈ ಬಾರಿಯೂ ಪುತ್ತೂರಿನಲ್ಲಿ ಬಿಜೆಪಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೇ6 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಆಗಮಿಸಲಿದ್ದು, ಅಂದು ಹೆಲಿಕಾಫ್ಟ್ ರ್ ಮೂಲಕ ಮುಕ್ರಂಪಾಡಿ ಹೆಲಿಪ್ಯಾಡ್ ಗೆ ಬಂದು ಅಲ್ಲಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರಲಿದ್ದಾರೆ. ಬಳಿಕ ಮುಖ್ಯ ಅಂಚೆ ಕಚೇರಿಯಿ ಬಳಿಯಿಂದ ತೆರೆದ ವಾಹನದಲ್ಲಿ ಬಸ್ ನಿಲ್ದಾಣ, ಕೋರ್ಟ್ ರಸ್ತೆಯಾಗಿ ರೋಡ್ ಶೋ ಮಾಡಲಿದ್ದಾರೆ. ಬಳಿಕ ಕಿಲ್ಲೇ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸುಮಾರು 25 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಕಾರ್ಯಕ್ರಮದಲ್ಲಿ ರಾಜ್ಯ. ಜಿಲ್ಲೆಯ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಪುತ್ತೂರು ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು.