ಪುತ್ತೂರು: ವೃತ್ತಿ, ಉದ್ಯೋಗ ನೀಡುವ ಶಿಕ್ಷಣವನ್ನು ಅರಸಿ ಸೂಕ್ತವಾದುದನ್ನು ಆಯ್ಕೆ ಮಾಡುವ ಪರ್ವ ಕಾಲವಿದು. ಅವಕಾಶಗಳು ಕೈಬೀಸಿ ಕರೆಯುತ್ತಿದೆ. ಆದರೆ ಶಿಕ್ಷಣಾವಕಾಶಗಳ ಮಾಹಿತಿ ಕೊರತೆಯಾಗಬಾರದು.ಸರಿಯಾದ ಸಮಯದಲ್ಲಿ ಸರಿಯಾದ ಶಿಕ್ಷಣ ದೊರಕಿದಾಗ ಒಬ್ಬ ಸಾಮಾನ್ಯ ವ್ಯಕ್ತಿಯು ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ.ಇಂತಹ ಸಮಯದಲ್ಲಿ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ,ಅವಶ್ಯಕತೆಗೆ ಅನುಕೂಲವಾಗುವಂತಹ ಶಿಕ್ಷಣದ ಅವಕಾಶಗಳನ್ನು ಆಯ್ಕೆಮಾಡಬೇಕು ಎಂದು ವಿವೇಕಾನಂದ ಕಾಲೇಜ್ ಆಫ್ ಆರ್ಟ್ಸ್,ಸೈನ್ಸ್ ಮತ್ತು ಕಾಮರ್ಸ್ ಇದರ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಶ ಭಟ್ ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಶಿಬಿರ ತರಂಗ -2023 ಎರಡನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಣ ಕ್ಷೇತ್ರದಲ್ಲಿರುವ ಅಪರಿಮಿತ ಅವಕಾಶಗಳ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಡನೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೃತ್ತಿ ಸಂಬಂಧಿತ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ.ಇಂತಹ ಸಂದರ್ಭದಲ್ಲಿ ಇರುವ ಸಾವಿರಾರು ವಿಭಿನ್ನ ಕೋರ್ಸ್‌ಗಳ ನಡುವೆ ಭವಿಷ್ಯವನ್ನು ರೂಪಿಸುವ ಅತ್ಯುತ್ತಮವಾದ ಕೋರ್ಸ್‌ಗಳನ್ನು ಆಯ್ಕೆ ಮಾಡಬೇಕಾದ ಅವಶ್ಯಕತೆ ಇಂದಿನ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿದೆ. ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿದ್ದರೆ ನಮ್ಮ ಆಯ್ಕೆಯನ್ನು ಸಮರ್ಪಕ ಎನ್ನುವ ರೀತಿಯಲ್ಲಿ ನಿಭಾಯಿಸಬಹುದು. ಅದಕ್ಕಾಗಿತಾನು ಆಯ್ಕೆಮಾಡಿಕೊಂಡ ವಿಷಯಗಳಲ್ಲಿ ಇನ್ನಷ್ಟು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಾಗ ,ತೆಗೆದುಕೊಂಡ ವಿಚಾರದ ಬಗ್ಗೆ ಗಂಭೀರವಾಗಿ ಅಧ್ಯಯನ ನಡೆಸಿದಾಗ ನಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು.ಎಂದು ಹೇಳಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‌ಇ) ಯ ಚಿತ್ರಕಲಾ ಶಿಕ್ಷಕ ರಮೇಶ್ ವಿದ್ಯಾರ್ಥಿಗಳಿಗೆ ಕ್ಲೇ ಮಾಡೆಲಿಂಗ್ ನ ತಯಾರಿಯ ಬಗ್ಗೆ ತಿಳಿಸಿ ವಿವಿಧ ಚಟುವಟಿಕೆಗಳ ಮೂಲಕ ಬಹುವರ್ಣದ ಮಾದರಿಗಳನ್ನು ತಯಾರಿಸಿದರು. ವಿದ್ಯಾರ್ಥಿಗಳಿಗೆ ಆಕರ್ಷಕ ಮೋಜಿನ ಆಟಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಆಡಿಸಿದರು. ವಿಜೇತರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು.
ಕಾರ್ಯಾಗಾರದಲ್ಲಿ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ಜನನಿ ಸ್ವಾಗತಿಸಿ, ವಂದಿಸಿದರು.