ಕಡಬ: ಭ್ರಷ್ಟಾಚಾರ ಮುಕ್ತ ಕರ್ನಾಟನ ನಿರ್ಮಾಣದ ಕನಸು ಹೊತ್ತಿರುವ ಕರ್ನಾಟಕ ರಾಷ್ಟ ಸಮಿತಿ(ಕೆ.ಅರ್.ಎಸ್) ಪಕ್ಷ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಫರ್ಧೆಗೆ ಇಳಿದಿದ್ದು ಪಕ್ಷದ ಅಭ್ಯರ್ಥಿಗೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ಸೂಚಿಸುವುದಲ್ಲದೆ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತೇವೆ ಎಂದು ಸಾಮಾಜಿಕ ಸಂಘಟನೆ ನೀತಿ ತಂಡ ಘೋಷಣೆ ಮಾಡಿದೆ.
ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ.ಕೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರವಿಕೃಷ್ಣಾ ರೆಡ್ಡಿಯವರ ನೇತೃತ್ವದಲ್ಲಿ ಸ್ಥಾಪನೆಯಾದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಪದಾಧಿಕಾರಿಗಳು ಸೇರಿ ನಿರ್ಮಿಸಿರುವ ಕರ್ನಾಟಕ ರಾಷ್ಟ್ರ ನಿರ್ಮಾಣ ಸಮಿತಿಯು ಒಂದು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಚುನಾವಣೆಗೆ ಸ್ಪಧಿಸುತ್ತಿದ್ದು, ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿರುವ ನಮ್ಮ ನೀತಿ ತಂಡವು ಸಮಾನ ಉದ್ದೇಶವನ್ನು ಹೊಂದಿರುವುದರಿಂದ ನಮ್ಮ ಬೆಂಬಲ ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಗಣೇಶ್ ಅವರಿಗೆ ಎಂದು ಹೇಳಿದರು. ರಾಜ್ಯದ ಯಾವುದೇ ಸರಕಾರಿ ಕಛೇರಿಗೆ ಹೋದರೂ ಹಣ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ. ರಾಜ್ಯವ್ಯಾಪಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇದರ ವಿರುದ್ಧ ನಾವು ನಿರಂತರ ಹೋರಾಟವನ್ನು ಹಮ್ಮಿಕೊಂಡು ಗ್ರಾಮ ಮಟ್ಟದಿಂದಲೇ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತಾ ಭ್ರಷ್ಟರನ್ನು ಜೈಲಿಗಟ್ಟುವ ಕೆಲಸ ಮಾಡುತ್ತಾ ಬಂದಿದ್ದೇವೆ. ಇತ್ತೀಚೆಗೆ ಕೊಂಬಾರಿನಲ್ಲಿ ಆನೆ ಕಾರ್ಯಾಚರಣೆ ವೇಳೆ ನಡೆದ ಗಲಭೆಯಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅಮಾಯಕರನ್ನು ರಾತ್ರೋ ರಾತ್ರಿ ಬಂಧಿಸಲಾಗಿದೆ. ಇವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದರಿಂದ ಮನನೊಂದು ಹಾಗೂ ಕೆ.ಆರ್ ಎಸ್ ಪಕ್ಷದ ಧ್ಯೇಯ ಉದ್ಧೇಶಗಳಿಗೆ ಆಕರ್ಷಿತರಾಗಿ ಆ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದೇವೆ ನಾವೆಲ್ಲಾ ಒಮ್ಮತದಿಂದ ಆಯ್ಕೆ ಮಾಡಿರುವ ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಗಣೇಶ್ ಅವರ ಸ್ಪರ್ಧೆಯಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಇನ್ನಷ್ಟು ಬಲ ಬಂದಿದೆ. ಇಂದಲ್ಲಾ ನಾಳೆ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಯಾಗಲಿದೆ.. ಕಡಬ ತಾಲೂಕು ದೇಶದಲ್ಲೇ ಪ್ರಥಮ ಬಾರಿಗೆ ಭ್ರಷ್ಟಾಚಾರ ಮುಕ್ತ ತಾಲೂಕು ಆಗುವ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ ಜಯಂತ್ ಭ್ರಷ್ಟಾಚಾರಕ್ಕೆ ವಿರುದ್ಧವಾಗಿರುವ ಕಾನೂನು ತಿದ್ದುಪಡಿಗೆ ಜನಪ್ರತಿನಿಧಿಯ ಅವಶ್ಯಕತಯಿದೆ ಈ ನಿಟ್ಟಿನಲ್ಲಿ ಕೆ.ಆರ್‌ಎಸ್ ಪಕ್ಷ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಅವರು ಮತದಾರರಲ್ಲಿ ವಿನಂತಿ ಮಾಡಿದರು.
ಕೆಆರ್‌ಎಸ್ ಪಕ್ಷದ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅವಿನಾಶ್ ಕಾರಿಂಜ ಮಾತನಾಡಿ, ನಮ್ಮ ಪಕ್ಷ ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣ ಅಗತ್ಯತೆಯ ಅರಿವು ಮೂಡಿಸಲು ಹಾಗೂ ಭ್ರಷ್ಟಾಚಾರ ಮುಕ್ತ ಕರ್ನಾಟಕ ಕಟ್ಟಲು ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ, ದೇಶದ ಮತ್ತು ರಾಜ್ಯ ಹಾಗೂ ದೇಶದ ರಾಜಕೀಯದಲ್ಲಿ ಮೌಲ್ಯಗಳನ್ನು ಮತ್ತು ಎತ್ತಿ ಹಿಡಿಯುವುದು, ರಾಜಕಾರಣವನ್ನು ಸ್ವಚ್ಛ ಹಾಗೂ ಪ್ರಾಮಾಣಿಕವಾಗಿ ನಡೆಸಬೇಕೆನ್ನುವ ಧ್ಯೇಯದೊಂದಿಗೆ ಪಕ್ಷ ಕೆಲಸ ಮಾಡುತ್ತಿದೆ, ರಾಜ್ಯದಲ್ಲಿ ಒಟ್ಟು 196 ಕ್ಷೇತ್ರಗಳಲ್ಲಿ ಪಕ್ಷ ಸ್ಪಧಿಸುತ್ತಿದೆ. ಸುಳ್ಯದಲ್ಲಿ ಪ್ರಥಮ ಬಾರಿಗೆ ಒಬ್ಬ ಪದವೀಧರ ಯುವಕನನ್ನು ಕಣಕಕ್ಕಿಳಿಸಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ನೀತಿ ತಂಡದ ಕಾರ್ಯಕರ್ತರಾದ ಸುರೇಂದ್ರ ಬಿಳಿನೆಲೆ, ಹಿರಿಯಣ್ಣ ಬಿಳಿನೆಲೆ, ಕೆ.ಆರ್‌ಎಸ್ ಪಕ್ಷದ ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಜೀವನ್ ನಾಕೋಡ್, ಕಾರ್ಯದರ್ಶಿ ಸುಧೀರ್ ಬೆಳಾರ್ಕರ್ ಮತ್ತಿತರರು ಉಪಸ್ಥಿತರಿದ್ದರು.