ಬೆಂಗಳೂರು: ಬೆಂಗಳೂರಿನ ಶಾಂಗ್ರಿಲಾ ಹೊಟೇಲ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಪ್ರಣಾಳಿಕೆಯ ಪ್ರಮುಖ ಅಂಶಗಳು:
1. ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ವರ್ಷಕ್ಕೆ ಮೂರು ಅಡುಗೆ ಅನಿಲ ವಿತರಣೆ (ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಯಂದು ಉಚಿತ ಸಿಲಿಂಡರ್ ವಿತರಣೆ)
2. ಗುಣಮಟ್ಟದ ಆಹಾರ ಒದಗಿಸುವುದಕ್ಕಾಗಿ ಮಹಾನಗರ ಪಾಲಿಕೆಯ ವಾರ್ಡ್ ಗಳಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ.
3. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲಾಗುವುದು.
4. ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ವಿತರಣೆ. ಅಲ್ಲದೆ ಪ್ರತಿ ತಿಂಗಳು ಸಿರಿಧಾನ್ಯಗಳ ಪಡಿತರ ಕಿಟ್ ಅನ್ನು ಪೋಷಣೆ ಯೋಜನೆಯ ಮೂಲಕ ವಿತರಣೆ.
5. ಒನಕೆ ಓಬವ್ವ ಸಾಮಾಜಿಕ ನ್ಯಾಯನಿಧಿ ಯೋಜನೆ ಪ್ರಾರಂಭಿಸಿ, ಇದರಲ್ಲಿ ಎಸ್ ಸಿ, ಎಸ್ಟಿ ಸಮುದಾಯದ ಮಹಿಳೆಯರಿಗೆ ಐದು ವರ್ಷದ ಭವಿಷ್ಯ ನಿಧಿಗೆ ಮಾಡುವ ಸ್ಥಿರ ಠೇವಣಿಗಳ ಮೇಲೆ 10,000 ರೂ.ವರೆಗೆ ಠೇವಣಿ ನೀಡಲಾಗುವುದು.
6. ವಸತಿರಹಿತ ಜನರಿಗೆ ಸರ್ವರಿಗೂ ಸೂರು ಯೋಜನೆಯಡಿ 10 ಲಕ್ಷ ವಸತಿ ನಿವೇಶನಗಳ ಹಂಚಿಕೆ.
7. ಕರ್ನಾಟಕ ಅಪಾರ್ಟ್ ಮೆಂಟ್ ಮಾಲೀಕತ್ವ ಕಾಯ್ದೆ 1972ಕ್ಕೆ ತಿದ್ದುಪಡಿ ತರಲಾಗುವುದು ಎಂದು ಭರವಸೆ ನೀಡಲಾಗಿದೆ. ಅಲ್ಲದೆ, ಇದರ ಕುಂದು ಕೊರತೆಗಳ ಪರಿಹಾರಕ್ಕೆ ಆನ್ಲೈನ್ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗುವುದು ಎಂದು ಘೋಷಣೆ.
8. ಸರ್ಕಾರಿ ಶಾಲೆಗಳನ್ನು ಅತ್ಯುನ್ನತ ಶ್ರೇಣಿಗೆ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು.
9. ಸಮನ್ವಯ ಯೋಜನೆಯಡಿ ಪ್ರತಿಭಾವಂತ ಯುವ ವೃತ್ತಿಪರರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕ್ರಿಯಾತ್ಮಕ ಪರಿಸರ ವ್ಯವಸ್ಥೆ ನಿರ್ಮಾಣದ ಭರವಸೆ.
10. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕ್ರಮ. ಸಿಲಿಕಾನ್ ಸಿಟಿಯನ್ನು ಡಿಜಿಟಲ್ ಇನನೋವೇಶನ್ ನ ಜಾಗತಿಕ ಕೇಂದ್ರವಾಗಿ ರೂಪಿಸಲು ಪೂರಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ.
11. ಐಎಎಸ್, ಕೆಎಎಸ್ ಮುಂತಾದ ಸರ್ಕಾರಿ ಉದ್ಯೋಗಾಂಕ್ಷಿಗಳಿಗೆ ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹ.
12. ‘ಮಿಷನ್ ಸ್ವಾಸ್ಥ್ಯ ಕರ್ನಾಟಕ’ ಯೋಜನೆ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯಗಳ ಸುಧಾರಣೆ. ಮಹಾನಗರ ಪಾಲಿಕೆಯ ಪ್ರತಿ ವಾರ್ಡ್ ನಲ್ಲಿ ಲ್ಯಾಬೊರೇಟರಿ ಸೌಲಭ್ಯ ಹೊಂದಿರುವ ನಮ್ಮ ಕ್ಲಿನಿಕ್ ಸ್ಥಾಪನೆ. ಹಾಗೆಯೇ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಸೌಕರ್ಯ ಕಲ್ಪಿಸಲಾಗುವುದು ಎಂದು ಘೋಷಣೆ.
13. ರಾಜ್ಯವನ್ನು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವಾಗಿ ರೂಪಿಸಲಾಗುವುದು. ಬೆಂಗಳೂರಿನ ಹೊರವಲಯದಲ್ಲಿ ‘ಇಬಿ ಸಿಟಿ’ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ.
14. ರಾಜ್ಯದ ಎಲ್ಲಾ ಗ್ರಾ.ಪಂ.ಗಳಲ್ಲಿ ಕಿರು ಶೀತಲೀಕರಣ ಸೌಲಭ್ಯ ಸ್ಥಾಪನೆ. ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ ಮಾಡಲಾಗುವುದು ಎಂದು ಘೋಷಣೆ.
15. ರಾಜ್ಯದ ಕಲ್ಯಾಣ ಸರ್ಕ್ಯೂಟ್, ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್ ಹಾಗೂ ಕಾವೇರಿ ಸರ್ಕ್ಯೂಟ್ ಗಾಣಗಾಪುರ ಕಾರಿಡಾರ್ ಅಭಿವೃದ್ಧಿಗೆ 91,500 ಕೋಟಿ ವಿನಿಯೋಗಕ್ಕೆ ಕ್ರಮ.
16. ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಘೋಷಿಸಲಾಗಿದೆ.
17. ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸರ್ಕಾರಿ ಉದ್ಯೋಗಾಂಕಾಂಕ್ಷಿಗಳಿಗೆ ತರಬೇತಿ ಪಡೆಯಲು ಆರ್ಥಿಕ ಪ್ರೋತ್ಸಾಹ ನೀಡುವ ಮೂಲಕ ವೃತ್ತಿ ಬೆಂಬಲ ಒದಗಿಸಲಾಗುವುದು.
18. ಕನ್ನಡ ಚಿತ್ರೋದ್ಯಮಕ್ಕೆ ಉದ್ಯಮ ಸ್ಥಾನಮಾನ, ಅಂತರರಾಷ್ಟ್ರೀಯ ಮಟ್ಟದ ಪುನೀತ್ ರಾಜ್ ಕುಮಾರ್ ಫಿಲ್ಮ್ ಸಿಟಿ ಸ್ಥಾಪನೆ.