ಬಾಲಕನನ್ನು ಮಹಡಿಯಿಂದ ದೂಡಿ ಕೊಂದ ಶಿಕ್ಷಕ ಸೆರೆ

ತಾಯಿಯ ಸಲುಗೆ ಮಗನ ಕೊಲೆಗೆ ಕಾರಣವಾಯಿತು

ಗದಗ: ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಭರತ್‌ನನ್ನು ಹತ್ಯೆ ಮಾಡಿದ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಬಾಲಕನ ತಾಯಿ ಗೀತಾ ಬಾರಕೇರ ಹಾಗೂ ಸಹಶಿಕ್ಷಕ ಸಂಗನಗೌಡ ಪಾಟೀಲ ಅವರ ಮೇಲೂ ಆರೋಪಿ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಅತಿಥಿ ಶಿಕ್ಷಕಿ ಗೀತಾ ಬಾರಕೇರ ಮೇಲೆ ಇದ್ದ ಮತ್ಸರವೇ ಬಾಲಕನ ಕೊಲೆಗೆ ಮತ್ತು ಶಿಕ್ಷಕರ ಹಲ್ಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ವಿವಾಹಿತ ಶಿಕ್ಷಕರ ಅನೈತಿಕ ನಡವಳಿಕೆಗೆ ಅಮಾಯಕ ವಿದ್ಯಾರ್ಥಿ ಬಲಿ ಆಗಿದ್ದಾನೆ. ಇಬ್ಬಿಬ್ಬರ ಜತೆಗೆ ಅಮ್ಮನ ಸಲುಗೆ ಮಗನಿಗೆ ಮುಳುವಾಗಿದೆ.
ಗೀತಾ ಬಾರಕೇರ ಇಬ್ಬರು ಶಿಕ್ಷಕರ ಜತೆ ಸಲುಗೆಯಿಂದ ಇದ್ದಳು. ಇದು ಆರೋಪಿ ಹಡಗಲಿಯ ಮತ್ಸರಕ್ಕೆ ಕಾರಣವಾಗಿತ್ತು. ಮುತ್ತಪ್ಪ ಹಡಗಲಿ ಹಾಗೂ ಗೀತಾ ಬಾರಕೇರ ಅವರ ನಡುವೆ ಮೊದಲಿನಿಂದಲೂ ಸಲುಗೆ ಇತ್ತು. ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಗೀತಾ ಬಾರಕೇರ ಸಹ ಶಿಕ್ಷಕ ಸಂಗನಗೌಡ ಪಾಟೀಲ ಜತೆಗೆ ಸಲುಗೆಯಿಂದ ನಡೆದುಕೊಂಡದ್ದು ಇವರಿಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಗೀತಾ ಮತ್ತು ನನ್ನ ನಡುವೆ ಸಲುಗೆ ಇತ್ತು. ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಆಕೆ ಸಹ ಶಿಕ್ಷಕನೊಂದಿಗೆ ಸಲುಗೆಯಿಂದ ನಡೆದುಕೊಂಡಿದ್ದು ಸಿಟ್ಟು ತರಿಸಿತ್ತು. ಈ ಕಾರಣದಿಂದಲೇ, ಗೀತಾಗೆ ಸಂಬಂಧಪಟ್ಟವರು ಯಾರೇ ಸಿಕ್ಕರೂ ಹೊಡೆದು ಹಾಕಬೇಕು ಎಂದು ನಿರ್ಧರಿಸಿದ್ದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top