ಪುತ್ತೂರು: ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ, ಸಿಂಗಂ ಖ್ಯಾತಿಯ ಅಣ್ಣಾಮಲೈ ಅವರು ಯುವಮತದಾರರೊಂದಿಗೆ ಶನಿವಾರ ಸಂವಾದ ನಡೆಸಿದರು.
ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಪಡೆಯುವ ಶಿಕ್ಷಣ ಯುವಜನಾಂಗವನ್ನು ಪ್ರಜ್ಞಾವಂತರನ್ನಾಗಿಸುತ್ತದೆ. ಮಾತ್ರವಲ್ಲ, ದೇಶಕಟ್ಟುವ ಕಾಯಕದಲ್ಲಿ ಪ್ರತಿಯೋರ್ವರನ್ನು ಸಮರ್ಥವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಶಿಕ್ಷಣ ಪಡೆಯುತ್ತಾ ಹೋದಂತೆ, ಮನಸ್ಸು ದೇಶಪ್ರೇಮದಿಂದ ವಿಚಲಿತವಾಗದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಶಿಕ್ಷಣ ಪಡೆಯುವ ಜೊತೆಜೊತೆಗೆ ರಾಷ್ಟ್ರೀಯ ವಿಚಾರಧಾರೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಮಾದರಿ ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟರು.
ಸುಡಾನಿನಲ್ಲಿ ತೊಂದರೆ ಅನುಭವಿಸುತ್ತಿದ್ದ ಭಾರತೀಯರನ್ನು ನಮ್ಮ ಸೈನಿಕರು ದೇಶಕ್ಕೆ ವಾಪಾಸ್ ಕರೆತಂದಿದ್ದಾರೆ. ಇದರ ಹಿಂದೆ ಟರ್ಕಿಯಲ್ಲಿ ಸಿಲುಕಿಕೊಂಡಿದ್ದ ಜನರನ್ನು ಭಾರತೀಯ ಏರ್ ಫೋರ್ಸ್ ಹಿಂದಕ್ಕೆ ಕರೆತಂದಿದೆ. ಇಂತಹ ದಿಟ್ಟತನದ ಕಾರ್ಯಾಚರಣೆಯ ಹಿಂದೆ ದೇಶದ ಸಮರ್ಥ ನಾಯಕತ್ವ ಇದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಹಿಂದುತ್ವವನ್ನೇ ಪ್ರತಿಪಾದಿಸಿದ ಪಕ್ಷ ಬಿಜೆಪಿ:
ಯುವಮತದಾರರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ, ಬಿಜೆಪಿ ತನ್ನ ಹುಟ್ಟಿನಿಂದ ಇದುವರೆಗೆ ಹಿಂದುತ್ವವನ್ನೇ ಪ್ರತಿಪಾದಿಸುತ್ತಾ ಬಂದ ಪಕ್ಷ. ವ್ಯಕ್ತಿಯೋರ್ವ ಹಿಂದುತ್ವವನ್ನು ಪ್ರತಿಪಾದನೆ ಮಾಡುವಾಗ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಅದೇ ವ್ಯಕ್ತಿ ಪಕ್ಷದೊಳಗಡೆ ಇದ್ದರೆ, ಆಗ ದಂಡಿಸುವ ಅಧಿಕಾರ ಪಕ್ಷಕ್ಕಿದೆ. ಪಕ್ಷ ತನ್ನ ವ್ಯಾಪ್ತಿಯಲ್ಲಿ ಹಿಂದುತ್ವದ ಪ್ರತಿಪಾದನೆಗಾಗಿ ಯಾರನ್ನು ಯಾವ ಸಂದರ್ಭದಲ್ಲಿ ಬಳಸಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡಿದೆ ಎಂದರು.
ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿದರು. ಸಾಂಸ್ಕೃತಿಕ ಚಿಂತಕ ಪ್ರಕಾಶ್ ಮಲ್ಪೆ ಅವರು ಸಂವಹನಕಾರರಾಗಿ ಸಹಕರಿಸಿದರು.