ಕಾಂಗ್ರೆಸ್ ಶಾಸಕರನ್ನು ಬೆದರಿಸಿ ಸೆಳೆಯುವ ಪ್ರಯತ್ನ ಎಂಬ ಆರೋಪ
ಬೆಂಗಳೂರು : ಕಾಂಗ್ರೆಸ್ ಮುಖಂಡರನ್ನು ಬೆದರಿಸಿ ಸೆಳೆಯಲು ಬಿಜೆಪಿ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯನ್ನು ಅಸ್ತ್ರವಾಗಿ ಮಾಡಿಕೊಂಡಿದೆ. ಚುನಾವಣೆ ಸಮೀಪಿಸುವಾಗ 21 ಕಾಂಗ್ರೆಸ್ ನಾಯಕ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
ಕಾಂಗ್ರೆಸ್‌ನ 21 ಮುಖಂಡರ ಮೇಲೆ ಇಡಿ ದಾಳಿ ಮಾಡಲು ಸಿದ್ಧತೆ ನಡೆದಿದೆ. ಕರ್ನಾಟಕಕ್ಕೆ 300 ಐಟಿ ಅಧಿಕಾರಿಗಳು ಬಂದಿದ್ದಾರೆ. ಇವರಿಗೆ 1,200 ಆರ್‌ಎಸ್‌ಎಸ್ ಕಾರ್ಯಕರ್ತರು ಸಹಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಅಡ್ಡಮಾರ್ಗ ತುಳಿದಿದೆ. ರಾಜ್ಯದ 224 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಪೊಲೀಸರ ಮೂಲಕ ಕಾಂಗ್ರೆಸ್ ಮುಖಂಡರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. ಇದು ಬಿಜೆಪಿಯ ರಾಕ್ಷಸ ಪ್ರವೃತ್ತಿಯಾಗಿದೆ ಎಂದು ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರ ಮೇಲೆ ಇಡಿ ಹಾಗೂ ಐಟಿ ದಾಳಿಯನ್ನು ಅಸ್ತ್ರವನ್ನಾಗಿಸಿಕೊಂಡಿದೆ. 8 ರಿಂದ 9 ಶಾಸಕರಿಗೆ ನೀವು ಬಿಜೆಪಿಗೆ ಬಂದರೆ ನಿಮ್ಮನ್ನು ಮುಟ್ಟುವುದಿಲ್ಲ ಎಂದು ಅಧಿಕಾರಿಗಳು ಮನವೊಲಿಸುತ್ತಿದ್ದಾರೆ. ಕೇಂದ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರಿಗೆ ಭದ್ರತೆ ನೀಡುವ ಗನ್ ಮ್ಯಾನ್‌ಗಳಲ್ಲಿ ಒಬ್ಬ ಇಡಿ ಅಧಿಕಾರಿ ಇದ್ದಾರೆ. ಆ ಮೂಲಕ ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕೆ ಬಿಜೆಪಿ ಕಿರುಕುಳ ನೀಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ 17 ಬಾರಿ ಇಡಿ ದಾಳಿ ಆಗಿದೆ ಎಂದಿದ್ದಾರೆ.